ಬಿಷ್ಣುಪುರ, ಮಣಿಪುರ: ಮಣಿಪುರ ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುತ್ತಿರುವ ಹಿಂಸಾಚಾರ ನಿಲ್ಲುವಂತೆ ಕಾಣುತ್ತಿಲ್ಲ. ಬಿಷ್ಣುಪುರ ಜಿಲ್ಲೆಯಲ್ಲಿ ಶುಕ್ರವಾರ ಮತ್ತು ಶನಿವಾರ ಮಧ್ಯರಾತ್ರಿ ನಡೆದ ಹಿಂಸಾಚಾರದ ಘಟನೆಯಲ್ಲಿ ವೃದ್ಧ ಮತ್ತು ಆತನ ಮಗ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಬಂದೂಕುಗಳು ಮತ್ತು ಕತ್ತಿಗಳೊಂದಿಗೆ ಶಸ್ತ್ರಸಜ್ಜಿತವಾದ ಶಂಕಿತ ಉಗ್ರಗಾಮಿಗಳು ಕ್ವಾಕ್ತಾ ಲಂಖೈ ಗ್ರಾಮದ ಮೇಲೆ ದಾಳಿ ನಡೆಸಿದ್ದಾರೆ. ಶಂಕಿತರು ಮನಬಂದಂತೆ ಗುಂಡಿನ ದಾಳಿ ಪ್ರಾರಂಭಿಸಿದ್ದು, ಈ ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಮಧ್ಯರಾತ್ರಿ ನಡೆದ ದಾಳಿಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಇಬ್ಬರು ಗ್ರಾಮಸ್ಥರನ್ನೂ ಶಂಕಿತರ ಅಪಹರಿಸಿದ್ದಾರೆ ಎಂದು ಮೂಲಗಳ ಖಚಿತಪಡಿಸಿವೆ. ದಾಳಿಯ ಪರಿಣಾಮವಾಗಿ ಗ್ರಾಮದ ಉಳಿದ ನಿವಾಸಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ತಂಡ ದಾಳಿಯ ಪ್ರದೇಶಗಳಿಗೆ ಧಾವಿಸಿ ಮೃತದೇಹಗಳನ್ನು ವಶಕ್ಕೆ ಪಡೆದಿದ್ದಾರೆ. ಮೃತರನ್ನು ಯುಮ್ನಮ್ ಪಿಶಾಕ್ ಮೈತೇಯಿ (67) ಮತ್ತು ಅವರ ಪುತ್ರ ಯುಮ್ನಮ್ ಪ್ರೇಮ್‌ಕುಮಾರ್ ಮೈತೇಯಿ (39) ಮತ್ತು ನೆರೆಹೊರೆಯವರಾದ ಯುಮ್ನಮ್ ಜಿತೇನ್ ಮೈತೇಯಿ (46) ಎಂದು ಗುರುತಿಸಲಾಗಿದೆ. ಘಟನೆಯ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ದಾಳಿಕೋರರು ಚುರಚಂದ್‌ಪುರದಿಂದ ಬಂದು ದಾಳಿ ಮಾಡಿದ್ದಾರೆ ಎನ್ನಲಾಗ್ತಿದೆ. ಘಟನೆಯ ನಂತರ ಕೋಪಗೊಂಡ ಗುಂಪು ಕ್ವಾಕ್ತಾದಲ್ಲಿ ಜಮಾಯಿಸಿ ಚುರಚಂದ್‌ಪುರ ಕಡೆಗೆ ಹೋಗಲು ಪ್ರಯತ್ನಿಸಿದ್ದಾರೆ. ಈ ವೇಳೆ, ಹತ್ತಿರದ ಫೌಗಕ್ಚಾವೊ ಮತ್ತು ಕ್ವಾಕ್ತಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಾಜ್ಯ ಪಡೆಗಳು ಮತ್ತು ಶಂಕಿತ ಉಗ್ರಗಾಮಿಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.