ಪಾಟ್ನಾ( ಬಿಹಾರ):ಪಶ್ಚಿಮ ಬಂಗಾಳದ ನಂತರ ಬಿಹಾರದಲ್ಲೂ ವೈರಲ್ ಜ್ವರ ಕಾಣಿಸಿಕೊಂಡು ಅಟ್ಟಹಾಸ ಮೆರೆಯುತ್ತಿದೆ. ನಳಂದಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕೇವಲ 24 ಗಂಟೆಯಲ್ಲಿ ಮೂರು ಮಕ್ಕಳು ತೀವ್ರ ಜ್ವರದಿಂದಾಗಿ ಸಾವನ್ನಪ್ಪಿದ್ದಾರೆ.
ಅಧಿಕಾರಿಗಳು ನೀಡಿರುವ ಮಾಹಿತಿಯಂತೆ ಸುಮಾರು ಎಂಟು ಮಕ್ಕಳು ಮಂಗಳವಾರ ವೈರಲ್ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದವು. ಇವುಗಳಲ್ಲಿ ಕೆಲವು ಮಕ್ಕಳ ಪರಿಸ್ಥಿತಿ ಚಿಂತಾಜನಕವಾಗಿದೆ.
ಸೆಪ್ಟೆಂಬರ್ 12ರಂದು ಬೆವೂರ್ ಮೂಲದ ಓರ್ವ ಮಗು ಕೂಡಾ ಇಲ್ಲಿ ದಾಖಲಾಗಿದ್ದು, ಅದು ಸಾವನ್ನಪ್ಪಿದೆ. ವೈಶಾಲಿ ಜಿಲ್ಲೆಯ ಸರೈನ ಎರಡೂವರೆ ವರ್ಷದ ಮಗು ಮತ್ತು ಖಗಾರಿಯಾ ಜಿಲ್ಲೆಯ ಮೂರು ತಿಂಗಳ ಮಗು ಕೂಡಾ ಸಾವನ್ನಪ್ಪಿದೆ. ಈ ಎರಡೂ ಮಕ್ಕಳು ಕ್ರಮವಾಗಿ ಸೆಪ್ಟೆಂಬರ್ 13 ಹಾಗೂ ಸೆಪ್ಟೆಂಬರ್ 10ರಂದು ಆಸ್ಪತ್ರೆಗೆ ದಾಖಲಾಗಿದ್ದವು.
ರಾಜ್ಯಾದ್ಯಂತ ಸುಮಾರು 830 ಮಕ್ಕಳು ವೈರಲ್ ಜ್ವರದಿಂದಾಗಿ ವಿವಿಧ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿವೆ. ಅವುಗಳಲ್ಲಿ ಸುಮಾರು 113 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ ಎಂದು ಬಿಹಾರ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಳಂದಾ ವೈದ್ಯಕೀಯ ಕಾಲೇಜು ಅಧೀಕ್ಷಕರಾದ ವಿನೋದ್ ಕುಮಾರ್ ಸಿಂಗ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾವು ಮಕ್ಕಳ ವಾರ್ಡ್‌ನಲ್ಲಿ 84 ಹಾಸಿಗೆಗಳನ್ನು ಹೊಂದಿದ್ದೇವೆ ಮತ್ತು ಅವುಗಳಲ್ಲಿ 59 ಹಾಸಿಗೆಗಳು ಭರ್ತಿಯಾಗಿವೆ. ರಾಜ್ಯದಲ್ಲಿ ವೈರಲ್ ಜ್ವರ ಆರಂಭವಾದಾಗಿನಿಂದ ನಮ್ಮ ಆಸ್ಪತ್ರೆಯಲ್ಲಿ ಆರು ಮಕ್ಕಳು ಸಾವನ್ನಪ್ಪಿವೆ ಎಂದಿದ್ದಾರೆ.
ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಇದುವರೆಗೆ ವೈರಲ್ ಜ್ವರದಿಂದಾಗಿ ಸುಮಾರು 40 ಮಕ್ಕಳು ಸಾವನ್ನಪ್ಪಿದ್ದಾರೆ. ಗೋಪಾಲಗಂಜ್, ಪಾಟ್ನಾ, ವೈಶಾಲಿ, ಸಿವಾನ್, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಮುಜಾಫರ್ ಪುರ್, ಸಮಸ್ತಿಪುರ, ಶಿಯೋಹರ್ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ.
ಇದನ್ನೂ ಓದಿ:2025ರ ವೇಳೆಗೆ ಇಂಡೋ ಅಮೆರಿಕನ್ ವ್ಯಾಪಾರ 500 ಬಿಲಿಯನ್ ಡಾಲರ್ಗೆ ಏರಿಕೆ: ಗಡ್ಕರಿ