ಜಬಲ್ಪುರ್(ಮಧ್ಯಪ್ರದೇಶದ) :ಮಧ್ಯಪ್ರದೇಶದ ಗ್ಯಾಂಗ್ವೊಂದು ಕೆಲಸ ಕೊಡಿಸುವುದಾಗಿ ನಂಬಿಸಿ ಮಹಿಳೆಯರನ್ನು ಅಶ್ಲೀಲ ನೃತ್ಯ ಮಾಡುವಂತೆ ಒತ್ತಾಯಿಸಿತ್ತು. ಅದರಂತೆ ಮಹಿಳೆಯರು ಮದುವೆ ಸಮಾರಂಭಗಳಲ್ಲಿ ಅಶ್ಲೀಲ ನೃತ್ಯ ಮಾಡುತ್ತಿದ್ದರು. ಈಗ ಈ ಗ್ಯಾಂಗ್ ಪೊಲೀಸರ ಕೈ ವಶವಾಗಿದೆ.
ಪೊಲೀಸರ ಪ್ರಕಾರ, ಜಬಲ್ಪುರದ ದಂಪತಿಯಾದ ಸನ್ನಿ ಮತ್ತು ನಿಧಿ ಸೋಂಧಿಯಾ ಸೇರಿದಂತೆ ದರ್ಭಾಂಗದ ಪಿಂಟೋ ಕುಮಾರ್ ಠಾಕೂರ್ ಸೇರಿ ಉದ್ಯೋಗದ ಹೆಸರಿನಲ್ಲಿ ಅಮಾಯಕ ಮಹಿಳೆಯರನ್ನು ವಂಚಿಸುತ್ತಿದ್ದರು. ಕೆಲಸ ಕೊಡುವುದಾಗಿ ಹೇಳಿ ಅವರೆಲ್ಲರನ್ನು ಬಿಹಾರಕ್ಕೆ ಸ್ಥಳಾಂತರಿಸುತ್ತಿದ್ದರು.
ಅಷ್ಟೇ ಅಲ್ಲ, ರಾಜ್ಯದ ವಿವಿಧ ಭಾಗಗಳಿಗೆ ಕಳ್ಳಸಾಗಣೆ ಮಾಡಿ ಮದುವೆ ಸಮಾರಂಭಗಳಲ್ಲಿ ಅಶ್ಲೀಲ ನೃತ್ಯ ಮಾಡುವಂತೆ ಒತ್ತಾಯಿಸುತ್ತಿದ್ದರು. ಇದನ್ನು ಪಿಂಟೋ ಕುಮಾರ್ ತನ್ನ ಇತರ ಇಬ್ಬರು ಸ್ನೇಹಿತರಾದ ಲವಕುಶ ರಾಯ್ ಮತ್ತು ಮಹೇಶ್ವರ್ ಶರ್ಮಾ ಅಲಿಯಾಸ್ ರಾಮ್ ಸಾಗರ್ ಜೊತೆ ನಿರ್ವಹಿಸುತ್ತಿದ್ದರು.
ಆದರೆ, ಈ ಗ್ಯಾಂಗ್ ಏಪ್ರಿಲ್ 11ರಂದು ಉದ್ಯೋಗದ ಹೆಸರಿನಲ್ಲಿ ಮೂವರು ಮಹಿಳೆಯರನ್ನು ಬಿಹಾರಕ್ಕೆ ಸ್ಥಳಾಂತರಿಸಿದೆ ಎಂದು ಜಬಲ್ಪುರ ಪೊಲೀಸರಿಗೆ ಇತ್ತೀಚೆಗೆ ಮಾಹಿತಿ ಬಂದಿತ್ತು. ಎಚ್ಚೆತ್ತ ಪೊಲೀಸರು ಬಿಹಾರ ಪೊಲೀಸರ ನೆರವಿನೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಮೋತಿಹಾರಿ ಪ್ರದೇಶದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಪರಾರಿಯಾಗಿರುವ ಮಹೇಶ್ವರ್ ಶರ್ಮಾ ಅಲಿಯಾಸ್ ರಾಮ್ ಸಾಗರ್ಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿಗಳ ಬಂಧನದಿಂದ ನಾಲ್ವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.