ಶ್ರೀನಗರ : ಉಗ್ರವಾದ ಮತ್ತು ಪ್ರತ್ಯೇಕತಾವಾದವನ್ನು ಬೆಂಬಲಿಸಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈ ಜೋಡಿಸಿ ಕೆಲಸ ಮಾಡುತ್ತಿದ್ದ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರ ಆಡಳಿತವು ಮೂವರು ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಕಠಿಣ ಕ್ರಮ ಜರುಗಿಸಿದೆ. ಈ ಮೂಲಕ ಕಳೆದ ಮೂರು ವರ್ಷಗಳಲ್ಲಿ ವಜಾಗೊಂಡಿರುವ ನೌಕರರ ಸಂಖ್ಯೆ 52ಕ್ಕೆ ತಲುಪಿದೆ.
ವರದಿಗಳ ಪ್ರಕಾರ, ಲೆಫ್ಟಿನೆಂಟ್ ಗವರ್ನರ್ ಆಡಳಿತವು ಈ ಉದ್ಯೋಗಿಗಳನ್ನು ಭಾರತದ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ವಜಾಗೊಳಿಸಿದೆ. ಕಾಶ್ಮೀರ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಫಹೀಮ್ ಅಸ್ಲಾಂ, ಹಣಕಾಸು ಇಲಾಖೆಯ ಉದ್ಯೋಗಿ (ಕಂದಾಯ ಅಧಿಕಾರಿ) ಮಾರ್ವತ್ ಹುಸೇನ್ ಮಿರ್ ಮತ್ತು ಪೊಲೀಸ್ ಕಾನ್ಸ್‌ಟೇಬಲ್ ಅರ್ಷದ್ ಅಹ್ಮದ್ ಥೋಕರ್ ಇಂದು ವಜಾಗೊಂಡ ಉದ್ಯೋಗಿಗಳು.
ಫಹೀಮ್ ಅಸ್ಲಾಂ ಮಾಜಿ ಪತ್ರಕರ್ತನಾಗಿದ್ದು, ಶ್ರೀನಗರದ ಹಜರತ್ ಬಿಲ್ ಪ್ರದೇಶಕ್ಕೆ ಸೇರಿದವನಾಗಿದ್ದಾನೆ. ಈತನನ್ನು ವಿಶ್ವವಿದ್ಯಾಲಯಕ್ಕೆ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ ನೇಮಿಸಲಾಗಿತ್ತು. ಮಾರ್ವತ್ ಹುಸೇನ್ ಎಂಬಾತ ಪುಲ್ವಾಮಾ ಜಿಲ್ಲೆಯ ಪನ್ಪುರ್ ಪಟ್ಟಣಕ್ಕೆ ಸೇರಿದವನಾಗಿದ್ದು, ರಾಜಕೀಯ ಪಕ್ಷಗಳು ಮತ್ತು ಕಾರ್ಮಿಕ ಸಂಘಗಳೊಂದಿಗೆ ಸಂಪರ್ಕ ಹೊಂದಿದ್ದಾನೆ. ಅರ್ಷದ್ ಅಹ್ಮದ್ ಥೋಕರ್ ಬುದ್ಗಾಮ್ ಜಿಲ್ಲೆಯ ಚಡೋರಾ ಪ್ರದೇಶದ ನಿವಾಸಿ.
ಇದನ್ನೂ ಓದಿ :Robbery case : 1.4 ಕೋಟಿ ರೂ. ದರೋಡೆ ಆರೋಪ ಪ್ರಕರಣ : 7 ಪೊಲೀಸರು ವಜಾ