ಮುಂಬೈ :ಶೇ. 28 ರಷ್ಟು ಭಾರತೀಯರು ಈ ವರ್ಷದ ಆಗಸ್ಟ್ - ಸೆಪ್ಟೆಂಬರ್ ನಡುವೆ ಪ್ರಯಾಣ ಕೈಗೊಳ್ಳಲು ಯೋಚಿಸುತ್ತಿದ್ದಾರೆ. ಇದು ಕೋವಿಡ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸರ್ಕಾರ ಈಗಿನಿಂದಲೇ ಪ್ರಯಾಣ ನಿರ್ಬಂಧ ಹೇರಬೇಕು ಎಂದು ಸಂಸ್ಥೆಯೊಂದು ಎಚ್ಚರಿಕೆ ನೀಡಿದೆ.
ಆನ್ಲೈನ್ ಫ್ಲ್ಯಾಟ್ ಫಾರ್ಮ್ ಲೋಕಲ್ ಸರ್ಕಲ್ಸ್ ಏಪ್ರಿಲ್ 12 ರಂದು ನಡೆಸಿದ ಸಮೀಕ್ಷೆಯ ಮಾಹಿತಿಯನ್ನು ಬಿಡುಗಡೆ ಮಾಡಿದ್ದು, ಕೋವಿಡ್ ಮೂರನೇ ಅಲೆಯ ಅಪಾಯವನ್ನು ತಡೆಯಲು ಸರ್ಕಾರ ಪ್ರಯಾಣ ನಿರ್ಬಂಧ ವಿಧಿಸುವಂತೆ ಸಲಹೆ ನೀಡಿದೆ.
ಕೋವಿಡ್ ಮೂರನೇ ಅಲೆಯ ಅಪಾಯ ಮತ್ತು ಜನರ ಪ್ರಯಾಣದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಲು ಲೋಕಲ್ ಸರ್ಕಲ್ಸ್ ಸಮೀಕ್ಷೆ ನಡೆಸಿತ್ತು. ಇದಕ್ಕಾಗಿ, ದೇಶದ ವಿವಿಧ ರಾಜ್ಯಗಳ 311 ಜಿಲ್ಲೆಗಳ 18,000 ಜನರಿಂದ ಮಾಹಿತಿ ಸಂಗ್ರಹಿಸಿದೆ. ಸಮೀಕ್ಷೆಯಲ್ಲಿ ಶೇ.68 ರಷ್ಟು ಪುರುಷರು ಮತ್ತು ಶೇ.32 ರಷ್ಟು ಮಹಿಳೆಯರು ಪಾಲ್ಗೊಂಡಿದ್ದರು.
ಆಗಸ್ಟ್ - ಸೆಪ್ಟೆಂಬರ್ ಅವಧಿಯಲ್ಲಿ ಶೇ. 28 ರಷ್ಟು ಜನರು ಪ್ರಯಾಣದ ಪ್ಲಾನ್ಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಪೈಕಿ ಶೇ. 5 ರಷ್ಟು ಜನರು ಮುಂಗಡ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಬೇಸಿಗೆಯಲ್ಲಿ ಲಾಕ್ಡೌನ್ ಕಾರಣ ಪ್ರವಾಸ ಕೈಗೊಳ್ಳಲಾಗದ ಜನರು ಈಗ ಪ್ರಯಾಣ ಮಾಡಲು ಮುಂದಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.