ನವದೆಹಲಿ: ತೆಲಂಗಾಣ ರಾಜ್ಯದ ಖಮ್ಮಮ್ ಜಿಲ್ಲೆಯ ಗ್ರಾನೈಟ್ ಶಿಲೆ ಮತ್ತೊಮ್ಮೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಿನುಗಲಿದೆ. ದೆಹಲಿಯ ನ್ಯಾಷನಲ್ ಪೊಲೀಸ್ ಮೆಮೊರಿಯಲ್ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸಮಾಧಿ ಮೇಲೆ ಈಗಾಗಲೇ ಮಿನುಗುತ್ತಿರುವ ಖಮ್ಮಮ್ ಗ್ರಾನೈಟ್ ಈಗ ಇಂಡಿಯಾ ಗೇಟ್ನಲ್ಲೂ ಕಾಣಿಸಲಿದೆ.
ಹೌದು, ತೆಲಂಗಾಣದ ಶಿಲೆಯಿಂದ ತಯಾರಾದ 28 ಅಡಿ ಎತ್ತರದ, ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು (ಗುರುವಾರ) ಸಂಜೆ ಲೋಕಾರ್ಪಣೆ ಮಾಡಲಿದ್ದಾರೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾಪುರುಷ ಸುಭಾಷ ಚಂದ್ರ ಬೋಸ್ ಅವರ ಕೊಡುಗೆಯನ್ನು ದೇಶಕ್ಕೆ ತಿಳಿಸುವ ನಿಟ್ಟಿನಲ್ಲಿ ರಾಜಧಾನಿಯ ಇಂಡಿಯಾ ಗೇಟ್ನಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸುವುದದಾಗಿ ಇದೇ ವರ್ಷದ ಜನವರಿಯಲ್ಲಿ ಪ್ರಧಾನಿ ತಿಳಿಸಿದ್ದರು. ಇದಕ್ಕಾಗಿ ಖಮ್ಮಮ್ ಜಿಲ್ಲೆಯಿಂದ 280 ಮೆಟ್ರಿಕ್ ಟನ್ ಗ್ರಾನೈಟ್ ಏಕಶಿಲೆಯನ್ನು ದೆಹಲಿಗೆ ತರಲಾಗಿತ್ತು. 1665 ಕಿಲೋಮೀಟರ್ ದೂರದಿಂದ 140 ಚಕ್ರಗಳ 100 ಅಡಿ ಉದ್ದದ ಲಾರಿಯಲ್ಲಿ ಶಿಲೆಯನ್ನು ತರಲಾಗಿತ್ತು. ಇದಕ್ಕಾಗಿ 26 ಸಾವಿರ ಗಂಟೆಗಳಷ್ಟು ಮಾನವ ಶ್ರಮದಿಂದ ನೇತಾಜಿಯವರ ಪ್ರತಿಮೆಯನ್ನು ಕೆತ್ತಲಾಗಿದೆ. ಇದು 28 ಅಡಿ ಉದ್ದ ಮತ್ತು 65 ಮೆಟ್ರಿಕ್ ಟನ್ ಭಾರವಾಗಿದೆ.
ಕರ್ನಾಟಕದ ಹೆಸರಾಂತ ಯುವ ಕಲಾವಿದ ಅರುಣ್ ಯೋಗಿರಾಜ್ ಅವರ ಮಾರ್ಗದರ್ಶನದಲ್ಲಿ ಆಧುನಿಕ ಉಪಕರಣಗಳನ್ನು ಬಳಸಿ ಸಾಂಪ್ರದಾಯಿಕ ಭಾರತೀಯ ಶೈಲಿಯಲ್ಲಿ ಪ್ರತಿಮೆಯನ್ನು ಕೆತ್ತಲಾಗಿದೆ. ಇದು ದೇಶದ ಅತಿ ಎತ್ತರದ ಏಕಶಿಲಾ ಪ್ರತಿಮೆಗಳಲ್ಲಿ ಒಂದಾಗಿದೆ.