ಮುಂಬೈ (ಮಹಾರಾಷ್ಟ್ರ):ಮುಂಬೈ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಸೋಮವಾರ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಗ್ನಲ್ಲಿ ಗುಪ್ತವಾಗಿ ಸಾಗಿಸುತ್ತಿದ್ದ 28 ಕೋಟಿ ರೂಪಾಯಿ ಮೌಲ್ಯದ 2.81 ಕೆಜಿ ಕೊಕೇನ್ ಡ್ರಗ್ಸ್ ಜಪ್ತಿ ಮಾಡಿದ್ದು, ಪ್ರಯಾಣಿಕನನ್ನು ಬಂಧಿಸಲಾಗಿದೆ. ಆರೋಪಿ ತಾನು ಹನಿಟ್ರ್ಯಾಪ್ಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾನೆ.
ವಿಮಾನ ನಿಲ್ದಾಣದಲ್ಲಿ ಹ್ಯಾಂಡ್ಬ್ಯಾಗ್ನಲ್ಲಿಟ್ಟು ಸಾಗುತ್ತಿದ್ದಾಗ ಅನುಮಾನದ ಮೇರೆಗೆ ಪೊಲೀಸರು ಆತನನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಬ್ಯಾಗ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಅದರಲ್ಲಿ ಏನೋ ಇರುವುದು ಕಂಡುಬಂದಿದೆ. ಬ್ಯಾಗ್ ಭಾರವಿದ್ದು ವಶಕ್ಕೆ ಪಡೆದಿದ್ದಾರೆ. ಬಳಿಕ ಅದನ್ನು ತೆಗೆದು ನೋಡಿದಾಗ ವಿಶೇಷವಾಗಿ ರೂಪಿಸಲಾದ ಪ್ಯಾಕ್ನಲ್ಲಿ ಡ್ರಗ್ಸ್ ಇರುವುದು ಗೊತ್ತಾಗಿದೆ.
ಬ್ಯಾಗ್ ಅನ್ನು ಸಂಪೂರ್ಣವಾಗಿ ತಪಾಸಿಸಿ ಅದರಲ್ಲಿದ್ದ ಮಾದಕ ದ್ರವ್ಯ ವಸ್ತುವಾದ ಕೊಕೇನ್ ಅನ್ನು ಜಪ್ತಿ ಮಾಡಲಾಗಿದೆ. 2.81 ಕೆಜಿ ತೂಕವಿದ್ದು, ಇದು ಮಾರುಕಟ್ಟೆ ದರದಲ್ಲಿ 28.10 ಕೋಟಿ ರೂ ಎಂದು ಅಂದಾಜಿಸಲಾಗಿದೆ. ಬಳಿಕ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆಯ ವೇಳೆ ಬಂಧಿತ, ತಾನು ಹನಿಟ್ರ್ಯಾಪ್ಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವ್ಯಕ್ತಿಯೊಬ್ಬ ತನ್ನನ್ನು ಬೆದರಿಸಿ ಈ ಕೆಲಸ ಮಾಡಿಸುತ್ತಿದ್ದಾನೆ ಎಂದು ತಿಳಿಸಿದ್ದಾನೆ.
ಕಳೆದ ವಾರ ₹47 ಕೋಟಿ ಡ್ರಗ್ಸ್ ಜಪ್ತಿ:ಕಳೆದ ವಾರವೂ ಕೂಡ ಮುಂಬೈ ನಿಲ್ದಾಣದಲ್ಲಿ 47 ಕೋಟಿ ರೂ. ಮೌಲ್ಯದ ಹೆರಾಯಿನ್ ಮತ್ತು ಕೊಕೇನ್ ಸಾಗಿಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಬಂಧಿಸಲಾಗಿತ್ತು. ಈ ದಾಳಿ ವಿಮಾನ ನಿಲ್ದಾಣದ ಮೂರನೇ ವಲಯದಲ್ಲಿ ನಡೆದಿತ್ತು. 31.29 ಕೋಟಿ ರೂಪಾಯಿ ಮೌಲ್ಯದ 4.47 ಕೆಜಿ ತೂಕದ ಹೆರಾಯಿನ್ ಮತ್ತು 1.59 ಕೆಜಿ ತೂಕದ ಕೊಕೇನ್ ಜಪ್ತಿ ಮಾಡಲಾಗಿತ್ತು. ಇದು 15.96 ಕೋಟಿ ರೂಪಾಯಿ ಮೌಲ್ಯದ್ದು ಎಂದು ಅಧಿಕಾರಿಗಳು ತಿಳಿಸಿದ್ದರು.