ಮುಂಬೈ:27 ವರ್ಷದ ಕ್ಲಾಸ್ ಒನ್ ಮಹಿಳಾ ಅಧಿಕಾರಿಯೋರ್ವರು ಸೊಸೈಡ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ಭಂಡಾರ ಜಿಲ್ಲೆಯಲ್ಲಿ ನಡೆದಿದೆ.
27 ವರ್ಷದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾ ಇಲಾಖೆ ಅಧಿಕಾರಿ ಶೀತಲ್ ಅಶೋಕ್ ಫಾಲ್ಕೆ ಬಾಡಿಗೆ ಮನೆಯಲ್ಲಿನ ಬಾತ್ರೂಮ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಯಾವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: 100ನೇ ವರ್ಷದ ಹುಟ್ಟುಹಬ್ಬದ ದಿನವೇ ಕೋವಿಡ್ ಲಸಿಕೆ ಪಡೆದ ಅಜ್ಜಿ
2017ರ ಜೂನ್ ತಿಂಗಳಿಂದಲೂ ಈ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮದುವೆ ಮಾಡಿಕೊಂಡಿರಲಿಲ್ಲ. ತಾಯಿ ಜತೆ ವಾಸವಾಗಿದ್ದ ಇವರು, ದಿಢೀರ್ ಆಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ. ಸ್ಥಳದಲ್ಲಿ ಸೊಸೈಡ್ ನೋಟ್ ಲಭ್ಯವಾಗಿದ್ದು, ಅದರಲ್ಲಿ ಯಾರ ಕುರಿತೂ ಆರೋಪ ಮಾಡಿಲ್ಲ. ಆದರೆ ಅಮ್ಮಾ ನನ್ನನ್ನು ಕ್ಷಮಿಸು ಎಂದು ಬರೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಶೀತಲ್ ಒತ್ತಡದಲ್ಲಿದ್ದಳು ಎಂದು ಆಕೆಯ ಸಹೋದ್ಯೋಗಿಗಳು ಮಾಹಿತಿ ನೀಡಿದ್ದು, ಶುಕ್ರವಾರ ಮಧ್ಯಾಹ್ನ ಕಣ್ಣೀರು ಹಾಕುತ್ತಿದ್ದಳು ಎಂದು ತಿಳಿಸಿದ್ದಾರೆ.