ಪಣಜಿ: ಇಲ್ಲಿನ ಗೋವಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಆಮ್ಲಜನಕದ ಕೊರತೆಯಿಂದಾಗಿ ಇಂದು ನಾಲ್ಕು ಗಂಟೆಗಳ ಅವಧಿಯಲ್ಲಿ 26 ಕೋವಿಡ್ ಸೋಂಕಿತರು ಮೃತಪಟ್ಟಿದ್ದಾರೆ.
ಮುಂಜಾನೆ 2 ರಿಂದ 6 ಗಂಟೆ ಅವಧಿಯಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗ್ತಿದೆ. ಆಸ್ಪತ್ರೆಗೆ ಅಗತ್ಯ ಪ್ರಮಾಣದಷ್ಟು ಆಮ್ಲಜನಕ ಪೂರೈಕೆಯಾಗಿಲ್ಲ. ಆದರೆ, ಆಸ್ಪತ್ರೆಯಲ್ಲಿದ್ದ ಆಮ್ಲಜನಕದ ನಿರ್ವಹಣೆಯಲ್ಲಿ ಯಾವುದೇ ವೈಫಲ್ಯ ಕಂಡು ಬಂದಿಲ್ಲ ಎಂದು ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದರು.
ಈ ಘಟನೆ ಕುರಿತು ಕೂಡಲೇ ಬಾಂಬೆ ಹೈಕೋರ್ಟ್‌ನ ಪಣಜಿ ಪೀಠ ತನಿಖೆ ನಡೆಸಬೇಕು. ಜಿಎಂಸಿಎಚ್‌ನಲ್ಲಿ ಕೋವಿಡ್ ರೋಗಿಗಳಿಗೆ ನೀಡುವ ಚಿಕಿತ್ಸೆಯ ಉಸ್ತುವಾರಿಯನ್ನೂ ಪೀಠ ವಹಿಸಿಕೊಳ್ಳಬೇಕು ಎಂದು ಸಚಿವ ರಾಣೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಹೊಸ ಪ್ರಕರಣ, ಸಾವಿನ ಸಂಖ್ಯೆಯಲ್ಲಿ ಇಳಿಕೆ : ಎರಡನೇ ಅಲೆ ಕ್ಷೀಣಿಸುತ್ತಿದೆ ಎಂದ ಕೇಂದ್ರ
ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಸಿಎಂ ಪ್ರಮೋದ್ ಸಾವಂತ್, ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿ ಆಮ್ಲಜನಕದ ಕೊರತೆ ಇಲ್ಲ. ಸಿಲಿಂಡರ್‌ಗಳನ್ನು ಸಕಾಲಕ್ಕೆ ರೋಗಿಗಳ ಬಳಿ ಒಯ್ದು, ಆಮ್ಲಜನಕ ಪೂರೈಕೆಗೆ ಸಿಬ್ಬಂದಿ ಕ್ರಮ ತೆಗೆದುಕೊಳ್ಳಲಿಲ್ಲ. ಹೀಗಾಗಿ ರೋಗಿಗಳು ಮೃತಪಟ್ಟಿದ್ದಾರೆ ಎಂದರು.