ನಾಗ್ಪುರ (ಮಹಾರಾಷ್ಟ್ರ):ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಾವುಗಳು ಹೆಚ್ಚುತ್ತಿರುವ ಬಗ್ಗೆ ಇತ್ತೀಚೆಗೆ ವರದಿಯಾಗುತ್ತಿದ್ದು, ಇದೀಗ ನಾಗ್ಪುರದ ಎರಡು ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ 24 ಗಂಟೆಗಳಲ್ಲಿ 25 ರೋಗಿಗಳು ಸಾವನಪ್ಪಿರುವುದು ವರದಿಯಾಗಿದೆ.
ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಮೇಯೊ) ಯಲ್ಲಿ ಕಳೆದ 24 ಗಂಟೆಗಳಲ್ಲಿ 25 ರೋಗಿಗಳು ಸಾವನ್ನಪ್ಪಿರುವುದು ವರದಿಯಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ 16 ರೋಗಿಗಳು ಹಾಗೂ ಮೇಯೊ ಆಸ್ಪತ್ರೆಯಲ್ಲಿ 9 ರೋಗಿಗಳು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಕೆಲವು ನವಜಾತ ಶಿಶುಗಳು ಸೇರಿದಂತೆ ವಿವಿಧ ವಯೋಮಾನ ರೋಗಿಗಳು ಸೇರಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ಅವಶ್ಯವಿರುವ ರೋಗಿಗಳು, ಹಾಗೂ ವೆಂಟಿಲೇಟರ್ನಲ್ಲಿರುವ ರೋಗಿಗಳನ್ನು ಮೇಯೊ ಹಾಗೂ ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಿಗೆ ಉಲ್ಲೇಖಿಸುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ ಎಂದು ಆಸ್ಪತ್ರೆಯ ಆಡಳಿತ ತಿಳಿಸಿದೆ.
ಕಳೆದ ಕೆಲವು ದಿನಗಳಲ್ಲಿ ನಾಂದೇಡ್ನ ಸರ್ಕಾರಿ ಆಸ್ಪತ್ರೆಯಲ್ಲಿ ಮೂರು ದಿನಗಳಲ್ಲಿ 35 ರೋಗಿಗಳು ಹಾಗೂ ಛತ್ರಪತಿ ಸಂಭಾಜಿನಗರದ ಘಾಟಿ ಆಸ್ಪತ್ರೆಯಲ್ಲಿ 24 ಗಂಟೆಗಳಲ್ಲಿ 18 ರೋಗಿಗಳು ಸಾವನ್ನಪ್ಪಿದ್ದ ಬಗ್ಗೆ ವರದಿಯಾಗಿತ್ತು.
ನಾಗ್ಪುರ ನಗರ ಮಧ್ಯ ಭಾರತದ ವೈದ್ಯಕೀಯ ಕೇಂದ್ರವಾಗಿ ಹೆಚ್ಚು ಹೊರಹೊಮ್ಮಿದ್ದು, ಇಲ್ಲಿ ಅನೇಕ ಆಸ್ಪತ್ರೆಗಳು ವೈದ್ಯಕೀಯ ಸೇವೆ ನೀಡುತ್ತಿವೆ. ಸಾವಿರಾರು ಖಾಸಗಿ ಆಸ್ಪತ್ರೆಗಳ ಜೊತೆಗೆ ಎರಡು ವೈದ್ಯಕೀಯ ಕಾಲೇಜುಗಳು- ನಾಗ್ಪುರ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ನಗರದಲ್ಲಿದೆ. ನೆರೆಯ ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ತೆಲಂಗಾಣದ ಜನರು ಕೂಡ ನಾಗ್ಪುರದ ಈ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುತ್ತಾರೆ.
ಸ್ಪಷ್ಟನೆ ನೀಡಿದ ಅಧೀಕ್ಷಕ:ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತರವಾಗಿ ಸಾವಿನ ವರದಿಗಳಾಗುತ್ತಿರುವುದರ ಬಗ್ಗೆ ವೈದ್ಯಕೀಯ ಅಧೀಕ್ಷಕ ಡಾ. ಶರದ್ ಕುಚೆವಾರ್ ಮಾತನಾಡಿದ್ದು, "ಪ್ರತಿದಿನ ಸರಾಸರಿ 14 ರಿಂದ 16 ರೋಗಿಗಳು ಆಸ್ಪತ್ರೆಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಸಾವಿನ ಸಂಖ್ಯೆ ಇದ್ದಕ್ಕಿದ್ದಂತೆ ಹೆಚ್ಚಿಲ್ಲ. ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಧ್ಯ ಭಾರತದಲ್ಲಿನ ಅತಿ ದೊಡ್ಡ ಸರ್ಕಾರಿ ವೈದ್ಯಕೀಯ ಕಾಲೇಜು. ವಿದರ್ಭ ಸೇರಿದಂತೆ ನೆರೆಯ ರಾಜ್ಯಗಳ ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬರುತ್ತಾರೆ. ಅದಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಸಾವಿನ ಹಂತಕ್ಕೆ ತಲುಪಿರುವ ರೋಗಿಗಳನ್ನು, ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಹಣ ವ್ಯಯಿಸಲು ಸಾಧ್ಯವಿಲ್ಲದೇ ಇರುವವರನ್ನು ಈ ಆಸ್ಪತ್ರೆಗೆ ಉಲ್ಲೇಖಿಸಲಾಗುತ್ತದೆ. ಹಾಗಾಗಿ ಇಲ್ಲೇ ಪ್ರತಿದಿನ 14 ರಿಂದ 16 ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಔಷಧಗಳ ದಾಸ್ತಾನು ಇದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಮತ್ತೆ 7 ರೋಗಿಗಳು ಸಾವು: ಎರಡು ದಿನದಲ್ಲಿ 31ಕ್ಕೆ ಏರಿಕೆಯಾದ ಮೃತರ ಸಂಖ್ಯೆ!