ಕರ್ನಾಟಕ

karnataka

ETV Bharat / bharat

ಮಂತ್ರಿಗಿರಿ ಸಿಕ್ಕ ಖುಷಿಯಲ್ಲಿ ಸಿಎಂ ಜಗನ್‌ ಕಾಲಿಗೆ ಬಿದ್ದ ಸಚಿವರು, ಕೈಗೆ ಮುತ್ತಿಕ್ಕಿದ ರೋಜಾ! - ಜಗನ್ ಮೋಹನ್ ಕ್ಯಾಬಿನೆಟ್​​ ಸೇರಿದ 25 ಶಾಸಕರು

ಆಂಧ್ರಪ್ರದೇಶ ಸರ್ಕಾರದ ಸಚಿವ ಸಂಪುಟ ಪುನರ್​ ರಚನೆಯಾಗಿದೆ. ಸಿಎಂ ಜಗನ್ ಮೋಹನ್ ರೆಡ್ಡಿ​ ಸಂಪುಟದಲ್ಲಿ ಹೊಸದಾಗಿ 14 ಶಾಸಕರಿಗೆ ಮಂತ್ರಿಗಿರಿ ಸಿಕ್ಕಿದೆ. ಮಂತ್ರಿಗಿರಿ ಸಿಕ್ಕ ಖುಷಿಯಲ್ಲಿ ಶಾಸಕರು 'ವಿಶೇಷ' ರೀತಿಯಲ್ಲಿ ಕೃತಜ್ಞತೆ ಅರ್ಪಿಸಿದರು.

Jagan New Cabinet
Jagan New Cabinet

By

Published : Apr 11, 2022, 4:09 PM IST

ಅಮರಾವತಿ(ಆಂಧ್ರಪ್ರದೇಶ):2024ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನರ್​ ರಚನೆ ಮಾಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ, ಕೆಲವು ಹೊಸ ಮುಖಗಳಿಗೆ ಮಣೆ ಹಾಕಿದ್ದಾರೆ. ಇವರ ಪೈಕಿ 11 ಸಚಿವರು ಈಗಾಗಲೇ ಜಗನ್​ ಮೋಹನ್ ಸಂಪುಟದಲ್ಲಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ. ಇಂದು ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಚಿವಗಿರಿ ಸಿಕ್ಕ ಮಹದಾನಂದದಲ್ಲಿ ಕೆಲ ಸಚಿವರು ಸಿಎಂ ಜಗನ್‌ ಕಾಲಿಗೆ ಬಿದ್ದರೆ, ಕೆಲವರು ಸಿಎಂರ ಎರಡೂ ಕೈಗಳಿಗೆ ಮುತ್ತಿಕ್ಕಿ ಕೃತಜ್ಞತೆ ಸಲ್ಲಿಸಿದ್ದು ಕಂಡುಬಂತು.!

ಕ್ಯಾಬಿನೆಟ್​​ನಲ್ಲಿ 14 ಶಾಸಕರು ಹೊಸದಾಗಿ ಮಂತ್ರಿ ಪದವಿ ಸ್ವೀಕರಿಸಿದ್ದಾರೆ. ಧರ್ಮಣ್​ ಪ್ರಸಾದ ರಾವ್, ಪಿ. ರಾಜಣ್ಣ ದೊರೆ, ಗುಡಿವಾಡ ಅಮರನಾಥ್, ಬುಡ್ಡಿ ಮುತ್ಯಾಲ ನಾಯ್ಡು, ದಾಡಿಶೆಟ್ಟಿ ರಾಜಾ, ಕರುಮುರಿ ನಾಗೇಶ್ವರರಾವ್, ಕಿಟ್ಟು ಸತ್ಯನಾರಾಯಣ, ಜೋಗಿ ರಮೇಶ್, ಅಂಬಟಿ ರಾಂಬಾಬು, ಮೇರಗಾ ನಾಗಾರ್ಜುನ, ವಿಡದಲ ರಜಿನಿ, ಕಾಕಣಿ ಗೋವರ್ಧನರೆಡ್ಡಿ, ಆರ್.ಕೆ.ರೋಜಾ ಮತ್ತು ಉಷಾ ಶ್ರೀ ಹೊಸದಾಗಿ ಸಂಪುಟ ಸೇರ್ಪಡೆಯಾಗಿದ್ದಾರೆ.

ಮಂತ್ರಿಗಿರಿ ಸಿಕ್ಕ ಖುಷಿಯಲ್ಲಿ ಹೊಸ ಸಚಿವರ ವಿಶೇಷ ರೀತಿಯ ಕೃತಜ್ಞತೆ!

ಉಳಿದಂತೆ, ಬೋತ್ಸಾ ಸತ್ಯನಾರಾಯಣ, ಪೆದ್ದಿರೆಡ್ಡಿ ರಾಮಚಂದ್ರರೆಡ್ಡಿ, ನಾರಾಯಣಸ್ವಾಮಿ, ಬುಗ್ಗನ ರಾಜೇಂದ್ರನಾಥ್, ಗುಮ್ಮನೂರು ಜಯರಾಂ, ಸಿದಿರಿ ಅಪ್ಪಲರಾಜು, ಪಿನಿಪೆ ವಿಶ್ವರೂಪಂ, ಚೆಲುಬೋನ ವೇಣುಗೋಪಾಲಕೃಷ್ಣ, ತಾನೇಟಿ ವನಿತಾ, ಅಮ್ಜದ್ ಬಾಷಾ ಮತ್ತು ಆದಿಮಳುಪು ಸುರೇಶ್ ಸಹ ಕ್ಯಾಬಿನೆಟ್​ನಲ್ಲಿ ಅವಕಾಶ ಪಡೆದುಕೊಂಡಿದ್ದು, ಇವರೆಲ್ಲರೂ 2019ರಿಂದಲೂ ಜಗನ್​ ಜೊತೆ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

ಹೊಸದಾಗಿ ಸಚಿವ ಸ್ಥಾನ ಸಿಗುತ್ತಿದ್ದಂತೆ ನಟಿ, ರಾಜಕಾರಣಿ ರೋಜಾ ಕಣ್ಣೀರು ಹಾಕಿದ್ದು, ಈ ವೇಳೆ ಮುಖ್ಯಮಂತ್ರಿ ಜಗನ್ ಬಳಿ ತೆರಳಿ ಅವರ ಕೈಗೆ ಪ್ರೀತಿಯಿಂದ ಮುತ್ತಿಕ್ಕಿದ್ದಾರೆ. ಇದರ ಜೊತೆಗೆ ಸಚಿವರೋರ್ವರು ಅವರ ಕಾಲಿಗೆರಗಿರುವ ಘಟನೆಯೂ ಸಹ ನಡೆಯಿತು.

ಇದನ್ನೂ ಓದಿ:ರೈತರು ಕಣ್ಣೀರು ಹಾಕಿದಾಗಲೆಲ್ಲ ಸರ್ಕಾರ ಉರುಳಿದ ಇತಿಹಾಸವಿದೆ: ಮೋದಿಗೆ ಕೆಸಿಆರ್‌ ಎಚ್ಚರಿಕೆ

ರಾಜ್ಯ ಸಚಿವಾಲಯದ ಬಳಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್​ ಅವರು ಎಲ್ಲ ಸಚಿವ ಸಂಪುಟದ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ವೈಎಸ್​​ಆರ್ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 2024ರ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕ್ಯಾಬಿನೆಟ್ ಪುನರ್​ ರಚನೆಯಾಗಿರುವ ಕಾರಣ ಪರಿಶಿಷ್ಟ ಜಾತಿ(ಎಸ್​ಸಿ) ಮುಖಂಡರಿಗೆ ಸಿಂಹಪಾಲು ನೀಡಲಾಗಿದೆ. 16 ಸಚಿವರು ಎಸ್​ಸಿಯವರಾಗಿದ್ದು, ಉಳಿದಂತೆ 5 ಎಸ್​ಟಿ ವರ್ಗಕ್ಕೆ ಸೇರಿದ್ದಾರೆ. 2019ರಲ್ಲಿ ನಡೆದ ಚುನಾವಣೆ ವೇಳೆ 175 ಸದಸ್ಯ ಬಲದ ಅಸೆಂಬ್ಲಿಯಲ್ಲಿ ಜಗನ್ ಮೋಹನ್ ರೆಡ್ಡಿ 151 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ABOUT THE AUTHOR

...view details