ಕೊಂಡಗಾಂವ್ (ಛತ್ತೀಸ್‌ಗಢ):ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ದೈಹಿಕವಾಗಿ ಶಿಕ್ಷಿಸುವುದೇ ತಪ್ಪು. ಅಂಥದ್ದರಲ್ಲಿ ಶಾಲಾ ಶೌಚಾಲಯ ಸ್ವಚ್ಛವಾಗಿಡದ 25 ವಿದ್ಯಾರ್ಥಿನಿಯರ ಕೈಗಳ ಮೇಲೆ ಸುಡುವ ಎಣ್ಣೆಯನ್ನು ಸುರಿದು ಶಿಕ್ಷಕಿಯರು 'ಶಿಕ್ಷೆ' ನೀಡಿದ್ದಾರೆ. ಮಕ್ಕಳ ಕೈಗಳಿಗೆ ತೀವ್ರ ಸುಟ್ಟ ಗಾಯಗಳಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಿಕ್ಷಕಿಯರನ್ನು ಶಿಕ್ಷಣ ಇಲಾಖೆ ಅಮಾನತು ಮಾಡಿದೆ.
ಛತ್ತೀಸ್‌ಗಢದ ಕೊಡಗಾಂವ್ನ ಸರ್ಕಾರಿ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ಡಿಸೆಂಬರ್ 7 ರಂದು ನಡೆದಿದೆ. ವಿದ್ಯಾರ್ಥಿಗಳ ಗುಂಪಿನಲ್ಲಿ ಶೌಚಾಲಯ ಸ್ವಚ್ಛ ಮಾಡದವರು ಯಾರು ಎಂದು ಶಿಕ್ಷಕಿಯರು ಪ್ರಶ್ನಿಸಿದ್ದಾರೆ. ಇದಕ್ಕೆ ವಿದ್ಯಾರ್ಥಿನಿಯರು ಉತ್ತರಿಸದಿದ್ದಾಗ ಅವರ ಕೈಗಳ ಮೇಲೆ ಬಿಸಿ ಎಣ್ಣೆಯನ್ನು ಸುರಿಯಲಾಗಿದೆ. ಮಕ್ಕಳು ನೋವಿನಿಂದ ಕಿರುಚಿದರೂ ಶಿಕ್ಷಕಿಯರು ಮಾತ್ರ ಶಿಕ್ಷೆ ಎಂಬರ್ಥದಲ್ಲಿ ನಡೆದುಕೊಂಡಿದ್ದಾರೆ.
ಕೈಗಳಿಗೆ ಸುಟ್ಟ ಗಾಯ:ಪೊಲೀಸರ ಪ್ರಕಾರ, ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಶೌಚಾಲಯದ ವಿಚಾರವಾಗಿ ಶಿಕ್ಷಕಿಯರು ಕಟುವಾಗಿ ನಡೆದುಕೊಂಡಿದ್ದಾರೆ. ವಿದ್ಯಾರ್ಥಿನಿಯರ ಕೈಗೆ ಬಿಸಿ ಎಣ್ಣೆ ಸುರಿದುಕೊಳ್ಳುವಂತೆ ಆದೇಶಿಸಿದ್ದಾರೆ. ಇದರಿಂದ ವಿದ್ಯಾರ್ಥಿನಿಯರ ಕೈಗಳಿಗೆ ಸುಟ್ಟ ಗಾಯಗಳಾಗಿವೆ ಎಂದು ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಷಯ ಹಬ್ಬಿದ ಬಳಿಕ ಶಾಲೆಯ ಮುಂದೆ ಪೋಷಕರು ಹಾಗೂ ಇತರ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥ ಶಿಕ್ಷಕಿಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ನಮ್ಮ ಕೈಗಳ ಮೇಲೆ ಬಿಸಿ ಎಣ್ಣೆ ಸುರಿಯುವಂತೆ ಶಿಕ್ಷಕರೇ ಆದೇಶಿಸಿದರು ಎಂದು ಸಂತ್ರಸ್ತ ವಿದ್ಯಾರ್ಥಿನಿಯರು ಪೋಷಕರ ಬಳಿ ದೂರಿದ್ದಾರೆ. ಎಣ್ಣೆ ಬಿದ್ದ ಜಾಗದಲ್ಲಿ ಗುಳ್ಳೆಗಳಾಗಿವೆ. ಶಾಲೆಯಲ್ಲಿ ತಮ್ಮ ಮಕ್ಕಳನ್ನು ಇಂತಹ ಆಘಾತಕಾರಿ ಶಿಕ್ಷೆಗೆ ಒಳಪಡಿಸಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ತಪ್ಪು ಮಾಡಿದ್ದಕ್ಕೆ ಮಕ್ಕಳೇ ಶಿಕ್ಷಿಸಿಕೊಂಡರು:ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ಶಾಲೆಯ ಮುಖ್ಯ ಶಿಕ್ಷಕಿ, ಶೌಚಾಲಯವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ವಿದ್ಯಾರ್ಥಿನಿಯರಿಗೆ ಹಲವು ಬಾರಿ ಎಚ್ಚರಿಕೆ ನೀಡಲಾಗಿತ್ತು. ಆದರೆ, ಮಕ್ಕಳು ನಿರ್ಲಕ್ಷ್ಯ ವಹಿಸಿದ್ದರು. ಹೀಗಾಗಿ ಮಕ್ಕಳು ತಮ್ಮನ್ನು ತಾವೇ ಶಿಕ್ಷಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ರಾಜು ಸಾಹು ಮಾತನಾಡಿ, ಮಾಹಿತಿ ಮೇರೆಗೆ ಶಾಲೆಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಮಕ್ಕಳ ಮೇಲೆ ಬಲವಂತವಾಗಿ ಬಿಸಿಎಣ್ಣೆ ಸುರಿದು ಗಾಯಗೊಳಿಸಿದ ಪ್ರಕರಣದಲ್ಲಿ ಮೂವರು ಶಿಕ್ಷಕಿಯರು ಮತ್ತು ಸ್ವಚ್ಛತಾ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಮಕ್ಕಳಿಗೆ ಸುಟ್ಟ ಗಾಯಗಳಾಗಿವೆ ಎಂದು ವಿದ್ಯಾರ್ಥಿನಿಯರ ಪೋಷಕರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಶಿಕ್ಷಕರ ವರ್ಗಾವಣೆ ನೀತಿ ಬಗ್ಗೆ ಮಹತ್ವದ ತೀರ್ಪು ನೀಡಿದ ಅಲಹಾಬಾದ್ ಹೈಕೋರ್ಟ್