ಹೈದರಾಬಾದ್(ತೆಲಂಗಾಣ):ಮಹಿಳೆ ಪುರುಷರಗಿಂತ ಯಾವುದರಲ್ಲಿ ಕಮ್ಮಿ ಇಲ್ಲ ಎಂಬುದನ್ನು ತೋರಿಸಿ ಯಾವುದೋ ಕಾಲ ಆಯಿತು. ಮಹಿಳೆಯರು ಈಗ ಎಲ್ಲ ರಂಗಗಳಲ್ಲಿ ಅತ್ಯುತ್ತಮ ಸಾಧನೆ ತೋರಿಸುತ್ತಿದ್ದಾರೆ. ಅಂತಹ ಸಾಲಿಗೀಗ ತೆಲಂಗಾಣದ ಯುವತಿಯೊಬ್ಬರು ಸೇರ್ಪಡೆಯಾಗಿದ್ದಾರೆ.
ತೆಲಂಗಾಣದ ಯುವತಿ ಅನ್ವಿತಾ ರೆಡ್ಡಿ ತನ್ನ ಯಶೋಗಾಥೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಯರ್ರಂಬಳ್ಳಿ ಗ್ರಾಮದ ನಿವಾಸಿ ಅನ್ವಿತಾ ರೆಡ್ಡಿ ಮೌಂಟ್ ಎವರೆಸ್ಟ್ ಏರಿದ್ದಾರೆ. ಅವರು ಸಮುದ್ರ ಮಟ್ಟದಿಂದ 8,848.86 ಮೀಟರ್ ಎತ್ತರದಲ್ಲಿರುವ ವಿಶ್ವದ ಅತ್ಯಂತ ಎತ್ತರದ ಎವರೆಸ್ಟ್ ಏರಿ ಈ ಮಹತ್ ಸಾಧನೆ ಮಾಡಿದ್ದಾರೆ.
ಮೂಲ ಶಿಬಿರದಿಂದ ಐದು ದಿನಗಳಲ್ಲಿ ಮೌಂಟ್ ಎವರೆಸ್ಟ್ ಏರಿ ಎಲ್ಲರ ಗಮನ ಸೆಳೆದಿದ್ದಾರೆ ಈ ಅನ್ವಿತಾ ರೆಡ್ಡಿ. ಹೈದರಾಬಾದ್‌ನ ಟ್ರಾನ್ಸ್‌ಸೆಂಡ್ ಅಡ್ವೆಂಚರ್ಸ್ ಮುಖ್ಯಸ್ಥ ಶೇಖರ್ ಬಾಬು ಬಾಚಿನೆಪಲ್ಲಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದು ಈ ಪ್ರಯತ್ನವನ್ನು ಅನಿತಾ ರೆಡ್ಡಿ ಅವರು ಮಾಡಿದ್ದಾರೆ.
ಅನ್ವಿತಾ ರೆಡ್ಡಿ ಅವರು ಗುರಿ ತಲುಪಿದ್ದು ಹೇಗೆ?: ಅನ್ವಿತಾ ರೆಡ್ಡಿ ಅವರು ಏಪ್ರಿಲ್ 2 ರಂದು ಹೈದರಾಬಾದ್‌ನಿಂದ ನೇಪಾಳಕ್ಕೆ ಹೊರಟು ಏಪ್ರಿಲ್ 4 ರಂದು ನೇಪಾಳ ತಲುಪಿದರು. ರಾಜಧಾನಿ ಕಠ್ಮಂಡುವಿನಲ್ಲಿ ಕೆಲ ದಿನಗಳ ಕಾಳ ವಿಶ್ರಾಂತಿ ಪಡೆದ ಅನ್ವಿತಾ ಅಲ್ಲಿಂದ ಅವರು ಲುಕ್ಲಾ ಎಂಬ ಸ್ಥಳವನ್ನು ತಲುಪಿದರು. 9 ದಿನಗಳ ಕಾಲ ಒಟ್ಟು 5,300 ಮೀಟರ್ ಎತ್ತರದಲ್ಲಿರುವ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಮುಟ್ಟಿದ್ದರು. ಅಲ್ಲಿಂದ 7,100 ಮೀ ಎತ್ತರದ ಶಿಖರಗಳನ್ನು ಏರಿ ನಂತರ ವಿಶ್ರಾಂತಿ ಪಡೆದುಕೊಂಡಿದ್ದರು.