ನವದೆಹಲಿ:ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಕಟ್ಟಿಹಾಕಲು ಕಾಂಗ್ರೆಸ್, ಟಿಎಂಸಿ, ಆಪ್ ಸೇರಿದಂತೆ 20ಕ್ಕೂ ಅಧಿಕ ವಿಪಕ್ಷಗಳು ಒಗ್ಗಟ್ಟಿನ ಮಂತ್ರ ಜಪಿಸುತ್ತಿವೆ. ಇದರ ಭಾಗವಾಗಿ ಬಿಹಾರದ ಪಾಟ್ನಾದಲ್ಲಿ 17 ಪಕ್ಷಗಳು ಮೊದಲ ಸಭೆ ನಡೆಸಿದ್ದವು. ಈಗ 2ನೇ ಸಭೆ ಬೆಂಗಳೂರಿನಲ್ಲಿ ಜುಲೈ 17 ಮತ್ತು 18 ರಂದು ಕರೆಯಲಾಗಿದ್ದು, ಎನ್‌ಡಿಎ ಭಾಗವಾಗಿದ್ದ ಕೆಡಿಎಂಕೆ ಮತ್ತು ಎಂಡಿಎಂಕೆ ಪಕ್ಷಗಳು ಸೇರಿಕೊಳ್ಳಲು ಮುಂದಾಗಿವೆ. ಸಭೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಜರಾಗುತ್ತಿರುವುದು ವಿಶೇಷ.
ಪ್ರತಿಪಕ್ಷಗಳ ಎರಡನೇ ಸಭೆಯಲ್ಲಿ ಮರುಮಲರ್ಚಿ ದ್ರಾವಿಡ ಮುನ್ನೇತ್ರ ಕಳಗಂ (MDMK), ಕೊಂಗು ದೇಸ ಮಕ್ಕಳ್ ಕಚ್ಚಿ (KDMK), ವಿದುತಲೈ ಚಿರುತೈಗಲ್ ಕಚ್ಚಿ (VCK), ಕ್ರಾಂತಿಕಾರಿ ಸಮಾಜವಾದಿ ಪಕ್ಷ (RSP), ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML), ಕೇರಳ ಕಾಂಗ್ರೆಸ್ (ಜೋಸೆಫ್ ಬಣ) ಮತ್ತು ಕೇರಳ ಕಾಂಗ್ರೆಸ್ (ಮಣಿ ಬಣ) ಪಕ್ಷಗಳು ಹೊಸದಾಗಿ ಸೇರಿಕೊಳ್ಳಲಿದ್ದು, ಇದರಿಂದ ವಿಪಕ್ಷಗಳ ಸಂಖ್ಯೆ 24ಕ್ಕೆ ಏರಿಕೆಯಾಗಲಿದೆ.
ವಿಶೇಷವೆಂದರೆ, ಕೆಡಿಎಂಕೆ ಮತ್ತು ಎಂಡಿಎಂಕೆ ಈ ಹಿಂದೆ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಮಿತ್ರಪಕ್ಷಗಳಾಗಿದ್ದವು. ಈಗ ವಿಪಕ್ಷಗಳ ಪಾಳಯ ಸೇರಿಕೊಳ್ಳಲು ಮುಂದಾಗಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಂದಿನ ಏಕತಾ ಸಭೆಯಲ್ಲಿ ಭಾಗವಹಿಸುವಂತೆ ವಿರೋಧ ಪಕ್ಷದ ಪ್ರಮುಖ ನಾಯಕರಿಗೆ ಆಹ್ವಾನವಿತ್ತಿದ್ದಾರೆ. ಜೊತೆಗೆ ಕಾಂಗ್ರೆಸ್ ಅಧಿಕನಾಯಕಿ ಸೋನಿಯಾ ಗಾಂಧಿ ಅವರು ಈ ಸಭೆಯಲ್ಲಿ ಭಾಗವಹಿಸಲಿದ್ದು, ನಿರೀಕ್ಷೆ ಗರಿಗೆದರಿದೆ.