ಎರ್ನಾಕುಲಂ: ಕೊಚ್ಚಿಯ ಕಿಜಕ್ಕಂಬಲಂನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಮಂದಿ ವಲಸೆ ಕಾರ್ಮಿಕರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ವಾಹನಕ್ಕೆ ಬೆಂಕಿ ಹಚ್ಚಿದ ವಲಸೆ ಕಾರ್ಮಿಕರು ಈ ಘಟನೆ ಸಂಬಂಧ ಒಟ್ಟು ಎರಡು ಪ್ರಕರಣಗಳು ದಾಖಲಾಗಿವೆ. ಸಿಐ(ಸರ್ಕಲ್ ಇನ್ಸ್‌ಪೆಕ್ಟರ್) ಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಮಂದಿಯನ್ನು ಹಾಗೂ ಪೊಲೀಸ್ ವಾಹನ ಜಖಂಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿಯನ್ನು ಬಂಧಿಸಲಾಗಿದೆ. ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇರುವುದರಿಂದ ಆರೋಪಿಗಳ ವೈದ್ಯಕೀಯ ಪರೀಕ್ಷೆಗೆ ವಿಶೇಷ ಸೌಲಭ್ಯ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಘಟನೆಯ ಹಿನ್ನೆಲೆ:
ಶುಕ್ರವಾರ ಮಧ್ಯರಾತ್ರಿ ಕಿಜಕ್ಕಂಬಲಂನಲ್ಲಿ ವಲಸೆ ಕಾರ್ಮಿಕರು ತಂಗಿದ್ದ ಶಿಬಿರದಲ್ಲಿ ಕ್ರಿಸ್ಮಸ್ ಆಚರಣೆಯ ಸಂದರ್ಭ ಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು, ಘರ್ಷಣೆ ಸಂಭವಿಸಿತ್ತು. ಆಗ ಘರ್ಷಣೆ ನಿಯಂತ್ರಿಸಲು ಆಗಮಿಸಿದ ಪೊಲೀಸರ ಮೇಲೆ 300ಕ್ಕೂ ಹೆಚ್ಚು ಕಾರ್ಮಿಕರು ಹಲ್ಲೆ ನಡೆಸಿದ್ದರು. ಅಲ್ಲದೇ ಎರಡು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಿದ್ದರು.
ಈ ವೇಳೆ ಕುನ್ನತ್ತುನಾಡು ಸಿಐ ಶಾಜನ್ ಸೇರಿದಂತೆ ಐವರು ಪೊಲೀಸರು ಗಾಯಗೊಂಡಿದ್ದರು. ಸದ್ಯ ಅವರು ಕೊಳಂಚೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಒಟ್ಟು 156 ಮಂದಿ ವಲಸೆ ಕಾರ್ಮಿಕರನ್ನು (ಕಿಟೆಕ್ಸ್ ಕಂಪನಿಯ ಸಿಬ್ಬಂದಿ) ಪೊಲೀಸರು ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ:ಕೊಚ್ಚಿ: ಅಂತಾರಾಜ್ಯ ಕಾರ್ಮಿಕರಿಂದ ಪೊಲೀಸರ ಮೇಲೆ ಹಲ್ಲೆ, ಐವರಿಗೆ ಗಾಯ