ನವದೆಹಲಿ:ಉತ್ತರ ಪ್ರದೇಶದ ಬುಲಂದ್‌ಶಹರ್‌ನ 23 ವರ್ಷದ ಮಹಿಳೆ ಕಳೆದ 7 ತಿಂಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ರಸ್ತೆ ಅಪಘಾತದಲ್ಲಿ ತಲೆಗೆ ಗಾಯವಾದ ನಂತರ ಮಹಿಳೆಗೆ ಅನೇಕ ಶಸ್ತ್ರಚಿಕಿತ್ಸೆ ಮಾಡಲಾಗಿದ್ದರೂ ಅವರು ಪ್ರಜ್ಞಾಹೀನ ಸ್ಥಿತಿಯಲ್ಲೇ ಮಲಗಿದ್ದಾರೆ. ಆದರೆ ಅಚ್ಚರಿಯೋ ಅಥವಾ ದೈವೇಚ್ಛೆಯೋ ಗೊತ್ತಿಲ್ಲ.. ಈ ಮಹಿಳೆ ಕಳೆದ ವಾರ ಏಮ್ಸ್ನಲ್ಲಿ ಆರೋಗ್ಯವಂತ ಹೆಣ್ಣು ಶಿಶುವಿಗೆ ಜನ್ಮ ನೀಡಿದ್ದಾರೆ.
ಅಪಘಾತದ ಸಮಯದಲ್ಲಿ ಮಹಿಳೆ ತನ್ನ ಪತಿಯೊಂದಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಆಕೆ ಹೆಲ್ಮೆಟ್ ಧರಿಸಿರಲಿಲ್ಲ. ಇದೇ ವರ್ಷದ ಮಾರ್ಚ್ 31 ರಂದು ಈ ಘಟನೆ ನಡೆದಿದೆ. ಅಪಘಾತದಲ್ಲಿ ಮಹಿಳೆಯ ತಲೆಗೆ ಆಳವಾದ ಮತ್ತು ಗಂಭೀರ ಗಾಯಗಳಾಗಿವೆ. ಈ ಅಪಘಾತದಲ್ಲಿ ಆಕೆಯ ಪ್ರಾಣ ಉಳಿಯಿತಾದರೂ ಆಕೆ ಪ್ರಜ್ಞಾಹೀನಳಾಗಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ನರಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್ ದೀಪಕ್ ಗುಪ್ತಾ ಹೇಳುವ ಪ್ರಕಾರ- ಅವರು ಕಣ್ಣು ತೆರೆದು ನೋಡುತ್ತಾರೆ. ಆದರೆ ಮಹಿಳೆ ಏನನ್ನೂ ಅರ್ಥಮಾಡಿಕೊಳ್ಳುವ ಅಥವಾ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿಲ್ಲ. ಹೆಲ್ಮೆಟ್ ಧರಿಸಿದ್ದರೆ ಅವರ ಜೀವನ ವಿಭಿನ್ನವಾಗಿರುತ್ತಿತ್ತು. ಬಹುಶಃ ಈಗ ಅವರು ಚೆನ್ನಾಗಿರುತ್ತಿದ್ದರು ಎನ್ನುತ್ತಾರೆ ಡಾ. ಗುಪ್ತಾ.