ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಬ್ಲಾಗ್ನಲ್ಲಿ ವಾರ್ಷಿಕ ಸುಧಾರಣೆಗಳ ಯೋಜನೆಯ ಮಾಹಿತಿ ಹಂಚಿಕೊಂಡಿದ್ದು, ಈ ಹೊಸ ನೀತಿಗಳಿಂದಾಗಿ ವಿವಿಧ ರಾಜ್ಯಗಳು ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಹೊಸ ಸುಧಾರಣೆ ಯೋಜನೆಗಳಿಂದಾಗಿ 23 ರಾಜ್ಯಗಳು ಹೆಚ್ಚುವರಿಯಾಗಿ 1.06 ಲಕ್ಷ ಕೋಟಿ ರೂ. ಸಾಲ ಪಡೆದುಕೊಂಡಿವೆ ಎಂದು ನಮೋ ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಬ್ಲಾಗ್ನಲ್ಲಿ ಸಮಗ್ರ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ 2.14 ಲಕ್ಷ ಕೋಟಿ ರೂ. ಸಾಲ ನೀಡುತ್ತಿತ್ತು. ಆದರೆ ಇದೀಗ ಹೆಚ್ಚುವರಿಯಾಗಿ 1.06 ಲಕ್ಷ ಕೋಟಿ. ರೂ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದಿದ್ದಾರೆ.
'ಆತ್ಮನಿರ್ಭರ ಭಾರತ' ಯೋಜನೆ ಅಡಿ 2020-21ರ ಹಣಕಾಸು ಅವಧಿಯಲ್ಲಿ ರಾಜ್ಯಗಳಲ್ಲಿ ಹೆಚ್ಚಿನ ಸಾಲ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇದಕ್ಕಾಗಿ ರಾಜ್ಯಗಳ ಒಟ್ಟು ದೇಶೀಯ ಉತ್ಪನ್ನದಲ್ಲಿನ ಶೇ. 1ರಷ್ಟು ಭಾಗ ಆರ್ಥಿಕ ಸುಧಾರಣೆಗೋಸ್ಕರ ಮೀಸಲಿಡಬೇಕು ಎಂದು ತಿಳಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ತಮ್ಮ ಬ್ಲಾಗ್ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ರಾಜ್ಯಗಳ ಉತ್ತಮ ಆರ್ಥಿಕ ನೀತಿಯಿಂದ ಮಾತ್ರ ಇದು ಸಾಧ್ಯ ಎಂದು ಹೇಳಿಕೊಂಡಿದ್ದಾರೆ. ಬಡವರು, ದುರ್ಬಲ ಹಾಗೂ ಮಧ್ಯಮ ವರ್ಗಕ್ಕೆ ಸುಲಭವಾಗಿ ಜೀವನ ಸುಧಾರಣೆಗೆ ವಿಶೇಷ ಯೋಜನೆ ಸಹಕಾರಿಯಾಗಲಿದೆ ಎಂದು ನಮೋ ತಿಳಿಸಿದ್ದಾರೆ.
ಒನ್ ನೇಷನ್ ಒನ್ ರೇಷನ್ ಕಾರ್ಡ್ ನೀತಿಯಿಂದ ಪ್ರಥಮ ಸುಧಾರಣೆ ಜಾರಿಗೆ ತಂದಿದ್ದು, ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಇದರೊಂದಿಗೆ ಸಂಪರ್ಕ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಲಾಗಿದೆ. ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಎಲೆಕ್ಟ್ರಾನಿಕ್ ಪಾಯಿಂಟ್ ಆಫ್ ಸೇಲ್ ಸಾಧನಗಳಿವೆ ಎಂದು ಹೇಳಿದ್ದಾರೆ. ರಾಜ್ಯಗಳಲ್ಲಿ ಆಸ್ತಿ ತೆರಿಗೆ, ನೀರು ಮತ್ತು ಒಳಚರಂಡಿ ಶುಲ್ಕಗಳ ದರ ಪಡೆದುಕೊಳ್ಳುವಲ್ಲೂ ಮಹತ್ವದ ಸುಧಾರಣೆ ತರಲಾಗಿದೆ ಎಂದು ಅವರು ಬ್ಲಾಗ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.