ಜಬಲ್ಪುರ(ಮಧ್ಯಪ್ರದೇಶ):ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಕಳೆದ ಕೆಲ ವಾರಗಳಿಂದ ಇದರ ತೀವ್ರತೆ ಗ್ರಾಮೀಣ ಪ್ರದೇಶಗಳಿಗೂ ಲಗ್ಗೆ ಹಾಕಿದೆ. ಹೀಗಾಗಿ ಜನರು ಆತಂತಕ್ಕೊಳಗಾಗಿದ್ದಾರೆ.
ಈ ಗ್ರಾಮ ಪಂಚಾಯ್ತಿಗಳಲ್ಲಿ ಇಲ್ಲ ಕೊರೊನಾ ಹಾವಳಿ ಆದರೆ, ಮಧ್ಯಪ್ರದೇಶದ ಜಬಲ್ಪುರದ 226 ಗ್ರಾಮ ಪಂಚಾಯ್ತಿಗಳಲ್ಲಿ ಕೊರೊನಾ ಸಂಪೂರ್ಣವಾಗಿ ಮಂಗಮಾಯವಾಗಿದೆ. ಇದಕ್ಕೆ ಕಾರಣವಾಗಿದ್ದು ಗ್ರಾಮಸ್ಥರ ಮುನ್ನೆಚ್ಚರಿಕೆ ಕ್ರಮ ಹಾಗೂ ಅರಿವು ಎಂಬುದು ಗಮನಾರ್ಹ ಸಂಗತಿಯಾಗಿದೆ.
ಕೊರೊನಾ ವಿರುದ್ಧ ಹೋರಾಟ ನಡೆಸಲು ಗ್ರಾಮಗಳಿಗೆ ಅಲ್ಲಿನ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಸಹಾಯ ಮಾಡಿದೆ. ಹೀಗಾಗಿ ಈ ಗ್ರಾಮ ಪಂಚಾಯಿತಿಗಳಲ್ಲಿ ಜನರು ಕೊರೊನಾ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದಾರೆ. ಹಳ್ಳಿಯೊಳಗೆ ಪ್ರವೇಶ ಹಾಗೂ ಹೊರಹೋಗುವುದನ್ನ ಸಂಪೂರ್ಣವಾಗಿ ನಿಷೇಧ ಮಾಡಲಾಗಿತ್ತು. ಯಾವುದೇ ಕೆಲಸಕ್ಕೂ ಹೋಗಬೇಕಾದ್ರೂ ಅಲ್ಲಿನ ಮುಖ್ಯಸ್ಥರ ಅನುಮತಿ ಕಡ್ಡಾಯವಾಗಿತ್ತು.
ಕೊರೊನಾ ಯುದ್ಧ ಗೆದ್ದ 226 ಗ್ರಾಮ ಪಂಚಾಯ್ತಿಗಳು ಇದನ್ನೂ ಓದಿ: ಕೋವಿಡ್ ನಿಯಂತ್ರಣಕ್ಕೆ 6 ರಿಂದ 8 ವಾರಗಳ ಲಾಕ್ಡೌನ್ ಅನಿವಾರ್ಯ: ಐಸಿಎಂಆರ್ ಮುಖ್ಯಸ್ಥ
ಕೊರೊನಾ ಮಾರ್ಗಸೂಚಿ ಪಾಲನೆ ಕಡ್ಡಾಯ
ಮದುವೆ, ಧಾರ್ಮಿಕ ಅಥವಾ ಇನ್ನಿತರ ಯಾವುದೇ ಕಾರ್ಯಕ್ರಮವಿದ್ದರೂ ಅಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲನೆ ಮಾಡಲಾಯಿತು. ಇದರ ಫಲವಾಗಿ ಇದೀಗ ಕೋವಿಡ್ ಇಲ್ಲಿಂದ ಕಾಲ್ಕಿತ್ತಿದೆ. ಗ್ರಾಮದಲ್ಲಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಹಾಗೂ ದಂಡ ವಿಧಿಸಲಾಗಿದ್ದು, ಇದಕ್ಕೆ ಹೆದರಿ ಎಲ್ಲರೂ ಕೋವಿಡ್ ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದಾರೆ.
ಪ್ರಮುಖವಾಗಿ ಜನಪದನ 42 ಗ್ರಾಮ ಪಂಚಾಯ್ತಿ, ಪನಗರದ 18, ಪಟಾನ್ನ 11, ಶಹಪುರ ಮತ್ತು ಕುಂದಂನ 46 ಗ್ರಾಮ ಪಂಚಾಯ್ತಿಗಳು, ಸಿಹೋರಾದ 29 ಪಂಚಾಯ್ತಿಗಳು ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿದ್ದು, ಮಜೌಲಿಯ 34 ಪಂಚಾಯ್ತಿಗಳಲ್ಲೂ ಕೋವಿಡ್ ಸುಳಿವಿಲ್ಲ.
ಮಾಹಿತಿ ಪ್ರಕಾರ 'ನನ್ನ ರಾಜ್ಯ ನನ್ನ ಗ್ರಾಮ ಕೊರೊನಾ ಮುಕ್ತ' ಅಭಿಯಾನ ನಡೆಸಲಾಗುತ್ತಿದ್ದು, ಗ್ರಾಮಿಣ ಪ್ರದೇಶಗಳಲ್ಲಿ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿರುವುದರಿಂದಲೇ ಇಷ್ಟೊಂದು ನಿಯಂತ್ರಣಕ್ಕೆ ಬಂದಿದೆ ಎಂದು ಹೇಳುತ್ತಾರೆ.