ಗಾಜಿಪುರ: ನವಜಾತ ಶಿಶುವನ್ನು ಪೆಟ್ಟಿಗೆಯಲ್ಲಿಟ್ಟು ಗಂಗಾನದಿಯಲ್ಲಿ ತೇಲಿ ಬಿಟ್ಟಿರುವ ಘಟನೆ ದಾದ್ರಿಘಾಟ್ ಬಳಿ ನಡೆದಿದೆ. ಗಾಳಿ ಜೋರಾಗಿ ಬೀಸಿದ್ದರಿಂದ ಮರದ ಪೆಟ್ಟಿಗೆಯು ದಡಕ್ಕೆ ಬಂದಿತ್ತು. ಅದರಲ್ಲಿ ಮಗು ಅಳುವ ಶಬ್ದ ಕೇಳಿ ಬಂದಿದ್ದು, ಸ್ಥಳೀಯರು ಆ ಬಾಕ್ಸ್ ಅನ್ನು ತೆರೆದು ನೋಡಿದಾಗ ಅದರಲ್ಲಿ ಮಗು ಇರುವುದು ಪತ್ತೆಯಾಗಿದೆ.
21 ದಿನದ ಮಗುವಿದ್ದ ಆ ಪೆಟ್ಟಿಗೆಯಲ್ಲಿ ದುರ್ಗಾದೇವಿ ಮತ್ತು ವಿಷ್ಣುವಿನ ಫೋಟೋಗಳಿದ್ದವು. ಇದರೊಂದಿಗೆ ಮಗುವಿನ ಜಾತಕ ಕೂಡ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪೆಟ್ಟಿಗೆಯಲ್ಲಿ ಮಗುವನ್ನು ಯಾರಿಟ್ಟರು, ಯಾಕಿಟ್ಟರು ಎಂಬ ಮಾಹಿತಿ ತಿಳಿದಿಲ್ಲ. ಗಂಗೆಯಲ್ಲಿ ತೇಲಿಬಂದ ಈ ಮಗು ನಿಜಕ್ಕೂ ದೇವತೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗುಲ್ಲು ಎಂಬ ವ್ಯಕ್ತಿ ಮಗುವನ್ನು ಮನೆಗೆ ಕರೆದೊಯ್ದು ಸ್ನಾನ ಮಾಡಿಸಿ ಹಾಲು ಕೊಟ್ಟಿದ್ದಾರೆ. ಸೋಮವಾರ ಈ ಪ್ರದೇಶದಲ್ಲಿ ಸಾಕಷ್ಟು ಮಳೆಯಾದ್ದರಿಂದ ಮಂಗಳವಾರ ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ.
ಇದನ್ನೂ ಓದಿ:ಹಗಲು ತರಕಾರಿ ವ್ಯಾಪಾರಿ, ರಾತ್ರಿ ಬೈಕ್ಗಳ ಚೋರ: ಖದೀಮ ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ಹೇಗೆ?
ಪೆಟ್ಟಿಗೆಯಲ್ಲಿ ಕಂಡುಬಂದ ಜನನ ಪ್ರಮಾಣಪತ್ರದ ಪ್ರಕಾರ ಮಗುವಿನ ಹೆಸರು ಗಂಗಾ. ಸದ್ಯ ಮಗು ಪೊಲೀಸ್ ರಕ್ಷಣೆಯಲ್ಲಿದೆ. ಸೋಮವಾರ ಸಂಜೆ, ಯುವಕ ಮತ್ತು ಯುವತಿಯರಿಬ್ಬರು ಮಲ್ಲಾ ಬಳಿಯ ದಾದ್ರಿ ಘಾಟ್‌ಗೆ ಬಂದು ಮಗು ನೀಡುವಂತೆ ಕೇಳಿದಾಗ ಗುಲ್ಲು ನಿರಾಕರಿಸಿದ್ದಾರೆ. ಅಲ್ಲದೆ, ಆ ಮಗುವನ್ನು ಬೆಳೆಸುವ ಜವಾಬ್ದಾರಿಯನ್ನು ನಾವೇ ಹೊರುತ್ತೇವೆ ಎಂದು ಅವರು ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನೊಂದು ವಾರದಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.