ನವದೆಹಲಿ: ದೇಶದಲ್ಲಿ ಡೆಡ್ಲಿ ವೈರಸ್ ಹಾವಳಿ ಜೋರಾಗಿರುವ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಸಮಸ್ಯೆ ಉಂಟಾಗಿದ್ದು, ಸರಿಯಾದ ಸಮಯಕ್ಕೆ ಆಮ್ಲಜನಕ ಪೂರೈಕೆಯಾಗದೇ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪೂರೈಕೆ ವ್ಯತ್ಯಯದಿಂದಾಗಿ 25 ರೋಗಿಗಳು ಸಾವನ್ನಪ್ಪಿದ್ದಾರೆ. ಕೇವಲ ಒಂದೇ ರಾತ್ರಿಯಲ್ಲಿ ಇಷ್ಟೊಂದು ರೋಗಿಗಳು ಸಾವನ್ನಪ್ಪಿರುವುದು ಇದೀಗ ರಾಷ್ಟ್ರ ರಾಜಧಾನಿಯಲ್ಲಿನ ಸ್ಥಿತಿ ತುಂಬಾ ಗಂಭೀರವಾಗಿದೆ ಎಂಬ ವಿಷಯ ಬಹಿರಂಗಗೊಳಿಸಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಜೈಪುರ್ ಗೋಲ್ಡನ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ಡಿಕೆ ಬೆಲುಜಾ, ನಮಗೆ ಸರ್ಕಾರದಿಂದ 3.5 ಮೆಟ್ರಿಕ್ ಟನ್ ಆಮ್ಲಜನಕ ನೀಡಲಾಗಿತ್ತು. ಸಂಜೆ 5 ಗಂಟೆ ಹೊತ್ತಿಗೆ ಸರಬರಾಜು ನಮ್ಮನ್ನು ತಲುಪಬೇಕಾಗಿತ್ತು. ಆದರೆ ಮಧ್ಯರಾತ್ರಿ ಹೊತ್ತಗೆ ಅದು ತಲುಪಿದೆ. ಹೀಗಾಗಿ ಆಕ್ಸಿಜನ್ ಕೊರತೆಯಿಂದಾಗಿ 25 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.