ಹೈದರಾಬಾದ್:2023ರ ಅಂತ್ಯದಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಕಮ್ಬ್ಯಾಕ್ ಮಾಡಿದೆ. 2018 ರಲ್ಲಿ ಈ ಎಲ್ಲ ರಾಜ್ಯಗಳನ್ನು ಕಳೆದುಕೊಂಡಿದ್ದ ಬಿಜೆಪಿ, ಬಳಿಕ ಹಿಂದಿ ಭಾಷಿಕ ರಾಜ್ಯಗಳಲ್ಲಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢಗಳಲ್ಲಿ ಭಾರತೀಯ ಜನತಾ ಪಕ್ಷ ಕ್ಲೀನ್ ಸ್ವೀಪ್ ಮಾಡಿ ಅಧಿಕಾರದ ಗದ್ದುಗೆ ಏರಿದೆ.
ಆದರೆ, ಈ ವರ್ಷ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಅದ್ಬುತ ಸಾಧನೆ ಮಾಡಿದ್ದು, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿದ್ದು, ಪಕ್ಷ ಹೊಸ ಹುರುಪಿನೊಂದಿಗೆ ಲೋಕಸಭಾ ಚುನಾವಣೆಗೆ ಹೋಗಲು ಬಲ ಬಂದಂತಾಗಿದೆ. ಆದರೆ, ನಿರ್ಣಾಯಕ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಕಳೆದ ಬಾರಿಯ ಸಾಧನೆಯನ್ನು ಮಾಡಲು ಸಾಧ್ಯವಾಗಿಲ್ಲ. ಆದರೆ ಬಿಜೆಪಿ ಈ ಬಾರಿ ಈ ಮೂರು ಪ್ರಬಲ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮುಂಬರುವ ಲೋಕ ಸಮರಕ್ಕೆ ಭರ್ಜರಿಯಾಗೇ ತಾಲಿಮು ಆರಂಭಿಸಿದೆ. ಕಾಂಗ್ರೆಸ್ನ ಗ್ಯಾರಂಟಿಗಳು ಹಿಂದಿ ಭಾಷಿಕ ರಾಜ್ಯಗಳಲ್ಲಿ ಕೈ ಹಿಡಿಯದೇ, ಮೋದಿ ಕಾ ಗ್ಯಾರಂಟಿ ಕಮಲವನ್ನು ಅರಳಿಸುವಲ್ಲಿ ಯಶಸ್ವಿಯಾಗಿದೆ.
ಮಧ್ಯಪ್ರದೇಶದಲ್ಲಿ ಬಿಜೆಪಿ 163 ಸ್ಥಾನಗಳನ್ನು ಪಡೆದುಕೊಂಡಿದ್ದು, 54 ಸ್ಥಾನಗಳನ್ನು ಹೆಚ್ಚಳ ಮಾಡಿಕೊಂಡಿದೆ. ಇನ್ನು ಕಾಂಗ್ರೆಸ್ 114 ರಿಂದ 66ಕ್ಕೆ ಕುಸಿದಿದ್ದು, ಒಟ್ಟಾರೆ 48 ಸ್ಥಾನಗಳನ್ನು ಕಳೆದುಕೊಂಡಿದೆ. ದಿಗ್ವಿಜಯ ಸಿಂಗ್ ಮತ್ತು ಕಮಲ್ ನಾಥ್ ಅವರ ಸಂಯೋಜನೆಯ 'ಜೈ-ವೀರು' ಶಿವರಾಜ್ ಸಿಂಗ್ ನೇತೃತ್ವದ ಬಿಜೆಪಿ ಸರ್ಕಾರವನ್ನು ಉರುಳಿಸುವಲ್ಲಿ ವಿಫಲವಾಗಿದೆ. ಈ ಮೂಲಕ ಮಧ್ಯಪ್ರದೇಶದಲ್ಲಿ ಇಬ್ಬರು ಹಿರಿಯ ಕಾಂಗ್ರೆಸ್ ನೇತಾರರು ತೆರೆ ಮರೆಗೆ ಸರಿಯುವಂತಾಗಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಯುವ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮೋಡಿ ಮಾಡಿದ್ದರಿಂದ ಕಾಂಗ್ರೆಸ್ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಅವರು ಬಿಜೆಪಿಗೆ ಬಂದಿದ್ದರಿಂದ ಅವರು ಪ್ರತಿನಿಧಿಸುವ ಗ್ವಾಲಿಯರ್ ಸೇರಿದಂತೆ ಇತರ ಪ್ರದೇಶಗಳಲ್ಲಿ ಈ ಬಾರಿ ಬಿಜೆಪಿ ಅದ್ಬುತ ಸಾಧನೆ ಮಾಡಿದೆ. ಇನ್ನು ಈ ಹಿಂದಿನ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಜಾರಿಗೆ ತಂದ ಮಹಿಳಾಪರ ಯೋಜನೆಗಳು ಭರ್ಜರಿ ಯಶಸ್ಸು ತಂದುಕೊಟ್ಟಿವೆ. ಅವರ ಲಾಡ್ಲಿ ಬೆಹನಾ ಯೋಜನೆ ಬಿಜೆಪಿಯನ್ನು ಮತ್ತೆ ಅಧಿಕಾರದ ಗದ್ದುಗೆ ಏರುವಂತೆ ಮಾಡಿದೆ.
ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಸಿಂಧಿಯಾ ಜೋಡಿ, ದಿಗ್ವಿಜಯ್ ಮತ್ತು ಕಮಲ್ನಾಥ್ ಜೋಡಿ ನಿವೃತ್ತಿಯಾಗುವಂತೆ ಮಾಡಿದೆ. ಮಧ್ಯಪ್ರದೇಶದ ಜನಾದೇಶವು ಬಿಜೆಪಿಗೆ ಆಡಳಿತ ವಿರೋಧಿ ಅಲೆಯನ್ನು ಮರೆಯುವಂತೆ ಮಾಡಿದರೆ. ರಾಜಸ್ಥಾನದಲ್ಲಿ ಆಡಳಿತ ವಿರೋಧಿ ಅಲೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಿದೆ. ಅಷ್ಟೇ ಅಲ್ಲ ಮೋದಿ ಕಾ ಗ್ಯಾರಂಟಿ, ಕಾಂಗ್ರೆಸ್ ಗ್ಯಾರಂಟಿಗಳನ್ನು ಕಿತ್ತೊಗೆದು ಹೊಸ ಸರ್ಕಾರದ ರಚನೆಗೆ ಕಾರಣವಾಗಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡರೆ, ಬಿಜೆಪಿ ಈ ಬಾರಿ 42 ಸ್ಥಾನಗಳನ್ನು ಏರಿಕೆ ಮಾಡಿಕೊಳ್ಳುವ ಮೂಲಕ 115 ಸ್ಥಾನಗಳೊಂದಿಗೆ ಬಹುಮತದ ಸರ್ಕಾರ ರಚನೆ ಮಾಡುವಲ್ಲಿ ಸಫಲವಾಗಿದೆ.
ಮುಳುವಾದ ಆಂತರಿಕ ಕಚ್ಚಾಟ:ಇನ್ನು ಕಾಂಗ್ರೆಸ್, ಸಚಿನ್ ಪೈಲಟ್ಹಾಗೂ ಸಿಎಂ ಗೆಹ್ಲೋಟ್ ಅವರ ಆಂತರಿಕ ಕಚ್ಚಾಟದಿಂದ ಸೊರಗಿದೆ. ಅಂತಿಮವಾಗಿ ಪಕ್ಷ ಅಧಿಕಾರ ಕಳೆದುಕೊಂಡಿದೆ. ಕಳೆದ ಬಾರಿಗಿಂತ 30 ಸ್ಥಾನಗಳನ್ನು ಕಳೆದುಕೊಂಡು ಅಧಿಕಾರದಿಂದಲೂ ವಂಚಿತವಾಗಿದೆ. 2018ರಲ್ಲಿ ಎದುಸಿರು ಬಿಟ್ಟು ಸರಳ ಬಹುಮತ ಪಡೆದಿದ್ದ ಪಕ್ಷ , ಈ ಬಾರಿ ಆಡಳಿತ ವಿರೋಧಿ ಅಲೆಯಲ್ಲಿ ತೇಲಿ ಹೋಗಿದೆ.
ಗ್ಯಾರಂಟಿಗಳ ಘೋಷಣೆ ಮೂಲಕ ಕರ್ನಾಟಕದಲ್ಲಿ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್, ಇವೇ ಗ್ಯಾರಂಟಿಗಳು, ಕಲ್ಯಾಣದ ಭರವಸೆಗಳನ್ನು ಇಟ್ಟುಕೊಂಡು ಭರ್ಜರಿ ಪ್ರಚಾರ ನಡೆಸಿದರು, ಅಧಿಕಾರ ಉಳಿಸಿಕೊಳ್ಳುವಲ್ಲಿ ಎಡವಿದೆ.