ಇಂಫಾಲ್(ಮಣಿಪುರ): 2023ರ ಅತ್ಯಂತ ಭೀಕರ ಘಟನೆಯೆಂದರೆ ಅದು ಮಣಿಪುರದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರ. ಇದೇ ವರ್ಷದ ಮೇ ತಿಂಗಳಿಂದ ಆರಂಭವಾದ ಭೀಕರ ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಟ 175ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 30ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಮೊದಲು ಜನಾಂಗೀಯ ಹಿಂಸಾಚಾರ ಭುಗಿಲೆದ್ದ 2023ರ ಮೇ 3, ಮಣಿಪುರದ ಇತಿಹಾಸದಲ್ಲಿ ಕರಾಳ ದಿನವಾಗಿಯೇ ಅಚ್ಚಾಗಿ ಉಳಿಯುತ್ತದೆ. ದೇಶದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾದ ಮಣಿಪುರದಲ್ಲಿ ಇತ್ತೀಚಿನ ಇತಿಹಾಸ ಬರೀ ಹಿಂಸಾಚಾರ.
ಈಶಾನ್ಯ ಭಾರತದ ಅತ್ಯಂತ ಚಿಕ್ಕ ರಾಜ್ಯಗಳಲ್ಲಿ ಮಣಿಪುರ ಕೂಡ ಒಂದು. ಬಹುಪಾಲು ಪರ್ವತ ಪ್ರದೇಶಗಳಿಂದಲೇ ಕೂಡಿರುವ ಮಣಿಪುರದಲ್ಲಿ ಬಯಲು ಪ್ರದೇಶ ಇರುವುದು ರಾಜ್ಯದ ಒಟ್ಟು ಭೂ ವಿಸ್ತೀರ್ಣದ ಶೇ 10ರಷ್ಟು ಮಾತ್ರ. ಅದು ಇರುವುದು ಇಂಫಾಲ್ ನದಿಯ ಇಕ್ಕೆಲಗಳಲ್ಲಿ. ಇದನ್ನು ಮಣಿಪುರ ಕಣಿವೆ ಅಥವಾ ಇಂಫಾಲ್ ಕಣಿವೆ ಎಂದು ಕರೆಯಲಾಗುತ್ತದೆ. ರಾಜ್ಯದ ಜನಸಂಖ್ಯೆಯ ಶೇ. 53ರಷ್ಟಿರುವ ಮೈತೇಯಿ ಸಮುದಾಯದವರು ಇದೇ ಇಂಫಾಲ್ ಕಣಿವೆ ಪ್ರದೇಶಗಳಲ್ಲಿ ನೆಲೆಸಿದ್ದಾರೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 40ರಷ್ಟಿರುವ ನಾಗಾಗಳು ಮತ್ತು ಕುಕಿಗಳನ್ನು ಒಳಗೊಂಡಿರುವ ಬುಡಕಟ್ಟು ಜನಾಂಗದವರು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ನೆಲೆಸಿದ್ದಾರೆ.
ಮೈತೀಯಿ ಸಮುದಾಯದ ಜನರು ತಮ್ಮನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಒತ್ತಾಯಿಸುತ್ತಿದೆ. ಮಣಿಪುರ ರಾಜ್ಯದ ವಿಧಾನಸಭೆಯ 60 ಶಾಸಕರಲ್ಲಿ 50 ಶಾಸಕರು ಮೈತೇಯಿ ಸಮುದಾಯದವರಿದ್ದು, ಇದಕ್ಕೆ ಸರ್ಕಾರವೂ ಒಂದು ಹೆಜ್ಜೆ ಮುಂದಿಟ್ಟಿತ್ತು. ಒಂದು ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕುರಿತು ಸರ್ಕಾರದ ನಡೆ ಹಾಗೂ ಹೈಕೋರ್ಟ್ನ ಆದೇಶ ನಾಗಾ ಮತ್ತು ಕುಕಿ ಬುಡಕಟ್ಟು ಜನಾಂಗದವರನ್ನು ಕೆರಳಿಸಿತ್ತು. ಇದನ್ನು ವಿರೋಧಿಸಿ ಕುಕಿ ಮತ್ತು ನಾಗಾ ಬುಡಕಟ್ಟು ಜನರು, ಒಗ್ಗಟ್ಟಿನ ಮೆರವಣಿಗೆ ಆಯೋಜಿಸಿದ್ದರು. ಈ ಮೆರವಣಿಗೆ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು.
ಈ ಹಿಂಸಾಚಾರ ಅದರಲ್ಲೂ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಹಾಗೂ ಮಹಿಳೆಯನ್ನು ಬೆತ್ತಲೆಯಾಗಿಸಿ ಮೆರವಣಿಗೆ ಮಾಡಿದ್ದ ಘಟನೆಯಂತು ಭಾರತ ದೇಶ ಇಡೀ ವಿಶ್ವದ ಮುಂದೆ ತಲೆತಗ್ಗಿಸುವಂತೆ ಮಾಡಿತ್ತು. ಚುರಾಚಂದ್ಪುರ ಜಿಲ್ಲೆಯ ಟೊರ್ಬಂಗ್ ಪ್ರದೇಶದಲ್ಲಿ ಘರ್ಷಣೆ ಉಂಟಾಗಿ, ಎರಡು ಗುಂಪುಗಳ ನಡೆಉವೆ ದಾಳಿ ಪ್ರತಿದಾಳಿ ನಡೆದಿತ್ತು. ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದಿದ್ದ ಸಂಘರ್ಷದಲ್ಲಿ ಅದೆಷ್ಟೋ ಅಂಗಡಿಗಳು, ಮನೆಗಳು ಧ್ವಂಸಗೊಂಡಿದ್ದವು. ಇಲ್ಲಿಂದ ಪ್ರಾರಂಭವಾದ ಹಿಂಸಾಚಾರ ನಂತರದಲ್ಲಿ ಕ್ರಮೇಣ ರಾಜ್ಯಾದ್ಯಂತ ಹರಡಿತ್ತು.
ಮಣಿಪುರ ಹಿಂಸಾಚಾರದ ಇತಿಹಾಸ: ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿರುವುದು ಇದೇ ಮೊದಲಲ್ಲ. 192ರಲ್ಲಿ ನಾಗಾ ಹಾಗೂ ಕುಕಿ ಸಮುದಾಯದ ನಡುವೆ ಘರ್ಷಣೆ ನಡೆದಿತ್ತು. ಅದಾದ ಮೇಲೆ 1997ರಲ್ಲಿ ಮತ್ತೊಮ್ಮೆ ಕುಕಿ ಮತ್ತು ಪೈತೆ ಸಮುದಾಯದ ನಡುವಿನ ಸಂಘರ್ಷಕ್ಕೆ ಮಣಿಪುರ ಸಾಕ್ಷಿಯಾಗಿತ್ತು.
ಮೈತೇಯಿ ಬೇಡಿಕೆ ದಶಕದಷ್ಟು ಹಳೆಯದು: ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನ ನೀಡುವಂತೆ ಮೈತೇಯಿ ಸಮುದಾಯ 10 ವರ್ಷಗಳ ಹಿಂದೆಯೇ ಸರ್ಕಾರದ ಮುಂದೆ ಬೇಡಿಕೆಯಿಟ್ಟಿದೆ. 1949ರಲ್ಲಿ ಮಣಿಪುರ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾಗುವ ಮುನ್ನ ಮೈತೇಯಿ ಸಮುದಾಯವನ್ನು ಬುಡಕಟ್ಟು ಎಂದೇ ಪರಿಗಣಿಸಲಾಗಿತ್ತು. ಆದರೆ ಒಕ್ಕೂಟಕ್ಕೆ ಸೇರ್ಪಡೆಯಾದ ನಂತರ ಆ ಸ್ಥಾನಮಾನ ತೆಗೆದುಹಾಕಲಾಗಿತ್ತು. ಇದರಿಂದಾಗಿ ತಮ್ಮ ಪಾರಂಪರಿಕ ಹಕ್ಕುಗಳಿಗೆ ಧಕ್ಕೆಯಾಗಿದೆ. ತಮ್ಮ ಸಮುದಾಯದ ಸಂಸ್ಕೃತಿ, ಭಾಷೆ ಹಾಗೂ ಪೂರ್ವಜರ ಭೂಮಿಯನ್ನು ಸಂರಕ್ಷಣೆ ಮಾಡಿಕೊಳ್ಳಬೇಕಾದರೆ ತಮಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿತ್ತು.
ಮಣಿಪುರಕ್ಕೆ ಭೇಟಿ ನೀಡದ ಪ್ರಧಾನಿ: ರಾಜ್ಯದಲ್ಲಿ ಹಿಂಸಾಚಾರ ಅತಿರೇಕಕ್ಕೆ ಹೋಗಿದ್ದಾಗ ಪ್ರತಿಪಕ್ಷ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡುವಂತೆ ಒತ್ತಾಯಿಸಿದ್ದರು. ವಿಧಾನಸಭಾ ಚುನಾವಣೆ ನಡೆದ ಪಂಚ ರಾಜ್ಯಗಳಿಗೆ ಪ್ರಧಾನಿ ಭೇಟಿ ನೀಡಿದ್ದರು. ಅಬ್ಬರದ ಚುನಾವಣಾ ಪ್ರಚಾರ, ರ್ಯಾಲಿಗಳಲ್ಲಿ ಮೋದಿ ಕೈ ಬೀಸಿದ್ದರು. ಆದರೆ ಮಣಿಪುರಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ.
ತಮ್ಮ ಬದಲಿಗೆ ಬಿಜೆಪಿ ಹಿರಿಯ ನಾಯಕ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಮಣಿಪುರಕ್ಕೆ ಭೇಟಿ ನೀಡಲು ನಿಯೋಜಿಸಿದ್ದರು. ರಾಜ್ಯಕ್ಕೆ ಭೇಟಿ ನೀಡಿ, ಅಲ್ಲಿನ ರಾಜಕೀಯ ನಾಯಕರನ್ನು ಭೇಟಿ ನೀಡಿ, ಪರಿಸ್ಥಿಯ ಬಗ್ಗೆ ಸಮಾಲೋಚಿಸುವಂತೆ ಸೂಚಿಸಿದ್ದರು. ಅಮಿತ್ ಶಾ ಹಲವರ ಜೊತೆ ಚರ್ಚಿಸಿದ ನಂತರ ಹಿಂಸಾಚಾರವನ್ನು ನಿಗ್ರಹಿಸಲು ಮಣಿಪುರ ರಾಜ್ಯಪಾಲರ ನೇತೃತ್ವದಲ್ಲಿ ಶಾಂತಿ ಸಮಿತಿಯ ರಚನೆಯನ್ನು ಘೋಷಿಸಿದ್ದರು.
ಮಣಿಪುರಕ್ಕೆ ರಾಹುಲ್ ಗಾಂಧಿ ಭೇಟಿ: ಮತ್ತೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ನಿಯೋಗ ರಾಜ್ಯಕ್ಕೆ ಭೇಟಿ ನೀಡಿತ್ತು. ಮೂರು ಸಮಿತಿಗಳು ಹಾಗೂ ಎನ್ಜಿಒಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ, ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದ್ದರು.