ನವದೆಹಲಿ: ಬಜೆಟ್ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಮಾಡಿದ್ದ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಪಾಲ್ಗೊಂಡು ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿವರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅವರು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸುತ್ತಾ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಯುಪಿಎ ಸರ್ಕಾರದ ಅವಧಿಯ ಆಡಳಿತವನ್ನು ಪ್ರಸ್ತಾಪಿಸಿ, "ಆ 10 ವರ್ಷಗಳಲ್ಲಿ ದೇಶದಲ್ಲಿ ಕೇವಲ ಹತ್ಯೆಗಳು, ಭಯೋತ್ಪಾದನೆ ಹಾಗು ಹಗರಣಗಳೇ ತುಂಬಿದ್ದವು. ಜಾಗತಿಕ ವೇದಿಕೆಯಲ್ಲಿ ಭಾರತದ ಧ್ವನಿ ದುರ್ಬಲವಾಗಿತ್ತು. 2014ರ ಮೊದಲು ದೇಶದ ಆರ್ಥಿಕತೆ ಹದಗೆಟ್ಟಿತ್ತು. 2004ರಿಂದ 2014ರವರೆಗೆ ಹತ್ತು ವರ್ಷಗಳ ಹಗರಣಗಳು ಮತ್ತು ಆರ್ಥಿಕ ದುರುಪಯೋಗದ ಕಾಲವೇ ಆಗಿ ಹೋಗಿತ್ತು" ಎಂದರು.
'ದೊಡ್ಡ ನಾಯಕನಿಂದ ಅವಮಾನ': "ರಾಷ್ಟ್ರಪತಿಗಳ ದೂರದೃಷ್ಟಿಯ ಭಾಷಣ ದೇಶದ ಅದೆಷ್ಟೋ ಜನರಿಗೆ ಒಳ್ಳೆಯ ಮಾರ್ಗ ತೋರಿಸಿದೆ. ಸಂಸತ್ತಿನಲ್ಲಿ ಅವರ ಉಪಸ್ಥಿತಿ ಐತಿಹಾಸಿಕ ಮತ್ತು ದೇಶದ ಮಹಿಳೆಯರು, ಯುವತಿಯರಿಗೆ ಸ್ಫೂರ್ತಿ. ಅವರು ಭಾಷಣ ಮಾಡುತ್ತಿದ್ದಾಗ 'ಒಬ್ಬ ದೊಡ್ಡ ನಾಯಕ' ಅವರನ್ನು ಅವಮಾನಿಸಿದರು. ಆ ಸಂದರ್ಭದಲ್ಲಿ ಸಮಾಜದ ಹಿಂದುಳಿದ ವರ್ಗದ ಬಗ್ಗೆ ಆ ನಾಯಕನ ಉದ್ದೇಶ ಸ್ಪಷ್ಟವಾಗಿ ಗೋಚರಿಸಿತು. ರಾಷ್ಟ್ರಪತಿಗಳ ಭಾಷಣದ ಬಗ್ಗೆ ಯಾರೂ ಮಾತನಾಡಲಿಲ್ಲ" ಎಂದು ಪ್ರಧಾನಿ ವಿಪಕ್ಷಗಳನ್ನು ಟೀಕಿಸಿದರು.
ಜಗತ್ತಿಗೆ ಭಾರತದಿಂದ ಪರಿಹಾರ: "ಭಾರತ ಈ ಹಿಂದೆ ಇತರರ ಮೇಲೆ ಅವಲಂಬಿತವಾಗಿತ್ತು. ಈಗ ಜಾಗತಿಕ ಸಮಸ್ಯೆಗಳನ್ನು ಪರಿಹರಿಸುತ್ತಿದೆ ಎಂದು ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಹೇಳಿದ್ದರು. ಆದರೆ, ಈ ಬಗ್ಗೆ ಯಾರೂ ಮಾತನಾಡಲೇ ಇಲ್ಲ. ಇದರ ವಿರುದ್ಧ ಮಾತನಾಡುವವರು ಯಾರಾದರೂ ಇರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ಅದರ ಬಗ್ಗೆಯೂ ಯಾರೂ ಮಾತನಾಡಲಿಲ್ಲ" ಎಂದು ಮೋದಿ ಹೇಳಿದರು.
ಹಲವು ದೇಶಗಳಲ್ಲಿ ಅಸ್ಥಿರತೆ: "ಜಗತ್ತಿನಲ್ಲಿ ಸಾಂಕ್ರಾಮಿಕ ರೋಗ ಹರಡಿತ್ತು. ಮತ್ತೊಂದೆಡೆ, ಯುದ್ಧ ನಡೆಯುತ್ತಿತ್ತು. ಜಗತ್ತು ವಿಭಜನೆಯಾಗಿತ್ತು. ಇಂತಹ ಸ್ಥಿತಿಯಲ್ಲಿ ದೇಶವನ್ನು ನಿಭಾಯಿಸಿದ ರೀತಿ ಮತ್ತು ದೇಶ ನೆಲನಿಂತಿರುವ ರೀತಿಯೇ ಅದ್ಭುತವಾಗಿದೆ. ನಮ್ಮ ಮುಂದೆ ಸವಾಲುಗಳಿವೆ. ಆದರೆ, ಇವುಗಳು 140 ಕೋಟಿ ಜನರ ಶಕ್ತಿಗಿಂತ ಬಲವಾಗಿಲ್ಲ. ಇಂದಿಗೂ ಹಲವು ದೇಶಗಳಲ್ಲಿ ಅಸ್ಥಿರತೆ ಇದೆ. ನಮ್ಮ ನೆರೆ ದೇಶಗಳೂ ಸಮಸ್ಯೆಗಳಿಂದ ಬಳಲುತ್ತಿವೆ. ಇಂತಹ ವಾತಾವರಣದಲ್ಲೂ ನಮ್ಮ ದೇಶವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ" ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದು ಸುಧಾರಣೆಯ ಸರ್ಕಾರ: "ಕೋವಿಡ್ ಸಮಯದಲ್ಲಿ ನಾವು ನಮ್ಮಲ್ಲಿಯೇ ಲಸಿಕೆ ತಯಾರಿಸಿ, ಜನರಿಗೆ ಉಚಿತವಾಗಿ ನೀಡಿದ್ದೇವೆ. ಅಷ್ಟೇ ಅಲ್ಲ, ಪ್ರಪಂಚದ ಸುಮಾರು 150 ದೇಶಗಳಿಗೆ ಲಸಿಕೆ ಮತ್ತು ಔಷಧಗಳನ್ನು ನೀಡಿದ್ದೇವೆ. ಈಗ ನಾವು ಸ್ಥಿರ ಮತ್ತು ನಿರ್ಣಾಯಕ ಸರ್ಕಾರವನ್ನು ಹೊಂದಿದ್ದೇವೆ. ಇದು ಸುಧಾರಣೆಯ ಸರ್ಕಾರವಾಗಿದೆ. ಈ ಸರ್ಕಾರ ಸಕಾರಾತ್ಮಕತೆ ಮತ್ತು ಭರವಸೆ ಕೇಂದ್ರಿತವಾಗಿದೆ" ಎಂದು ವಿವರಿಸಿದರು.