ಬೆಂಗಳೂರು/ಮುಂಬೈ:2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಂಡಿರುವ ಹಿನ್ನೆಲೆ ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ತೀವ್ರ ವಾಗ್ದಾಳಿ ನಡೆಸಿದರು. ಈ ಕುರಿತು ಟ್ವೀಟ್ ಮಾಡಿದ ಸಿದ್ದರಾಮಯ್ಯ ಅವರು, ''ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಂದು ನೋಟು ಬ್ಯಾನ್ ಮಾಡಿರುವುದು ದುಃಖಕರವಾಗಿದೆ.
ಕೇಂದ್ರ ಸರ್ಕಾರಕ್ಕೆ ತಮ್ಮದೇ ನೀತಿಗಳ ಬಗ್ಗೆ ಸ್ಪಷ್ಟತೆ ಇಲ್ಲ. 2016ರಲ್ಲಿ ₹2,000 ನೋಟುಗಳನ್ನು ಬ್ಯಾನ್ ಮಾಡುವ ಯೋಜನೆ ಇದ್ದರೆ, ಅದನ್ನು ಏಕೆ ಪರಿಚಯಿಸಿದರು? ತಮ್ಮ ವೈಫಲ್ಯಗಳನ್ನು ಬಗೆಗಿನ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿಯ ಹತಾಶೆ ಪ್ರಯತ್ನ ಇದಾಗಿದೆ'' ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
2,000 ರೂ. ನೋಟುಗಳನ್ನು ಹಿಂತೆಗೆದುಕೊಂಡಿರೋದು ಕೇಂದ್ರ ಸರ್ಕಾರದ ವೈಫಲ್ಯ- ಎಂವಿಎ ಗರಂ:''ಸೆಪ್ಟೆಂಬರ್ 30 ರೊಳಗೆ 2,000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಹಿಂತೆಗೆದುಕೊಳ್ಳುವ ಕ್ರಮದಿಂದ ಕೇಂದ್ರದ ಬಿಜೆಪಿ ಸರ್ಕಾರವು ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ'' ಎಂದು ಮಹಾರಾಷ್ಟ್ರದ ಪ್ರತಿಪಕ್ಷ ಮಹಾ ವಿಕಾಸ್ ಅಘಾಡಿ (ಎಂವಿಎ) ಶುಕ್ರವಾರ ಕಟುವಾಗಿ ಟೀಕಿಸಿದೆ.
''ಹಿಂದೆ 500-1000 ರೂಪಾಯಿ ನೋಟು ಅಮಾನ್ಯೀಕರಣದೊಂದಿಗೆ ಕಪ್ಪು ಹಣ, ಭಯೋತ್ಪಾದನೆ ಇತ್ಯಾದಿಗಳು ಕೊನೆಗೊಳ್ಳುತ್ತವೆ ಎಂದು ಬಿಜೆಪಿ ಹೇಳಿತ್ತು. ಆದರೆ, ಆ ಎಲ್ಲಾ ದೊಡ್ಡ ಹೇಳಿಕೆಗಳು ಪೊಳ್ಳು ಎನ್ನುವುದು ಸಾಬೀತಾಗಿದೆ'' ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ಅತುಲ್ ಲೋಂಧೆ ಆಕ್ರೋಶ ವ್ಯಕ್ತಪಡಿಸಿದರು.''ಸದ್ಯ 2000 ರೂಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ತೆಗೆದು ಹಾಕಿರುವುದು ಸರ್ಕಾರದ ವೈಫಲ್ಯವನ್ನು ಸ್ಪಷ್ಟವಾಗಿ ಒಪ್ಪಿಕೊಳ್ಳುವಂತೆ ಆಗಿದೆ'' ಎಂದು ಕಿಡಿಕಾರಿದರು.
ಜನರಿಗೆ ಈ ರೀತಿ ಕಿರುಕುಳ ನೀಡುವುದು ಏಕೆ?- ಕ್ಲೈಡ್ ಕ್ರಾಸ್ಟೊ ಗರಂ:ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಅವರು, ''2,000 ರೂ. ನೋಟುಗಳನ್ನು ಪರಿಚಯಿಸಿದಾಗ ಸರ್ಕಾರವು ನಿಖರವಾದ ಪ್ರಯೋಜನಗಳೇನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಈಗ ಅದೇ ನೋಟುಗಳನ್ನು ಅಬ್ಬರದಿಂದ ಹಿಂತೆಗೆದುಕೊಳ್ಳುವುದರಿಂದ ಅದು ಹೇಗೆ ಲಾಭ ಪಡೆಯುತ್ತದೆ'' ಎಂದು ಪ್ರಶ್ನಿಸಿದರು. "2000 ರೂಪಾಯಿ ನೋಟುಗಳನ್ನು ತಕ್ಷಣ ಮಾರುಕಟ್ಟೆಗೆ ಪರಿಚಯಿಸಿದ ಸರ್ಕಾರವು ನೋಟು ಅಮಾನ್ಯೀಕರಣವನ್ನು 'ದೊಡ್ಡ ಯಶಸ್ಸು' ಎಂದು ಕರೆದಿತ್ತು. ಹಾಗಿದ್ದಲ್ಲಿ, ಈಗ ಈ ನೋಟುಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಜನರಿಗೆ ಈ ರೀತಿ ಕಿರುಕುಳ ನೀಡುವುದು ಏಕೆ" ಎಂದು ಕೇಳಿದರು.
ಶಿವಸೇನೆ - ಯುಬಿಟಿ ರಾಷ್ಟ್ರೀಯ ವಕ್ತಾರ ಕಿಶೋರ್ ತಿವಾರಿ ಮಾತನಾಡಿ, ''2016ರಲ್ಲಿ 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟು ಅಮಾನ್ಯೀಕರಣವು ಸಂಪೂರ್ಣವಾಗಿ ವಿಫಲವಾದ ಕಾರಣ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ'' ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಅಂತಾಷ್ಟ್ರೀಯ ಇಮೇಜ್ ಮೇಲೆ ಪರಿಣಾಮ- ಎಂವಿಎ ಕಿಡಿ:"ನವೆಂಬರ್ 2016ರಲ್ಲಿ ನೋಟು ಅಮಾನ್ಯೀಕರಣದ ದುರಂತದ ನಂತರ ದೇಶಕ್ಕೆ ಯಾವುದೇ ಸ್ಪಷ್ಟವಾದ ಲಾಭವನ್ನು ನೀಡದ ನಂತರ, ಇದು ಮತ್ತೊಂದು ಆರ್ಥಿಕ ಪ್ರಯೋಗವಾಗಿದೆಯೇ ಎಂದು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಅಲ್ಲದೇ, ಸರ್ಕಾರವು ಈಗ 1000 ರೂ. ನೋಟುಗಳನ್ನು ಪರಿಚಯಿಸುತ್ತದೆಯೇ ಅಥವಾ ಈಗಿರುವ 500 ರೂ. ಮುಖಬೆಲೆಯು ಉಳಿಯುತ್ತದೆಯೇ ಎಂದು ಪ್ರಶ್ನಿಸಿದರು. ಇಂತಹ ಹಠಾತ್, ಕಠಿಣ ಕ್ರಮಗಳು ಸಾಮಾನ್ಯ ಜನರಿಗೆ ಸರಿ ಹೋಗುವುದಿಲ್ಲ. ದೇಶದ ಅಂತರಾಷ್ಟ್ರೀಯ ಇಮೇಜ್ ಮೇಲೆ ಪರಿಣಾಮ ಬೀರಲಿದೆ'' ಎಂದು ಎಂವಿಎ ನಾಯಕರು ಅಸಮಾಧಾನ ವ್ಯಕ್ತಡಿಸಿದರು.
ಇದನ್ನೂ ಓದಿ:2000 ರೂ. ನೋಟ್ ಹಿಂಪಡೆದುಕೊಂಡ ಆರ್ಬಿಐ... ನೋಟು ಇದ್ದವರು ಹೀಗೆ ಮಾಡಿ...! ಭಯಬೇಡ - ಆರ್ಬಿಐ ಅಭಯ