ನವದೆಹಲಿ :ಯುದ್ಧದ ಪರಿಸ್ಥಿಯನ್ನು ಎದುರಿಸುತ್ತಿರುವ ಉಕ್ರೇನ್ ದೇಶದ ಹಲವು ನಗರಗಳಲ್ಲಿ ಸಿಲಿಕಿರುವ ಭಾರತೀಯರ ರಕ್ಷಣೆಯೇ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದಿರುವ ಕೇಂದ್ರ ಸರ್ಕಾರ, ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ದೇಶಕ್ಕೆ ವಾಪಸ್ ಕರೆತರಲು ಪರ್ಯಾಯ ರಸ್ತೆ ಮಾರ್ಗಗಳು ಸೇರಿದಂತೆ ಲಭ್ಯ ಇರುವ ಎಲ್ಲಾ ಕಾರ್ಯತಂತ್ರಗಳನ್ನು ಅನುಸರಿಸುತ್ತಿದೆ.
ಭಾರತೀಯರನ್ನು ಉಕ್ರೇನ್‌ನಿಂದ ಸ್ಥಳಾಂತರಿಸುವ ವಿಚಾರವಾಗಿ ಭಾರತ ಸರ್ಕಾರದ ಅಧಿಕಾರಿಗಳು ಜಿನೀವಾದಲ್ಲಿರುವ ಅಂತಾರಾಷ್ಟ್ರೀಯ ರೆಡ್‌ಕ್ರಾಸ್ ಸಮಿತಿಯನ್ನು (ಐಸಿಆರ್‌ಸಿ) ಸಂಪರ್ಕಿಸಿದ್ದಾರೆ.
ನಾಗರಿಕರ ಭದ್ರತಾ ಹಿತಾಸಕ್ತಿಗಳನ್ನು ಅರಿತುಕೊಳ್ಳಲು ಮತ್ತು ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಸಾಧ್ಯವಿರುವಲ್ಲೆಲ್ಲಾ ಅವರನ್ನು ಹೊರಗೆ ಕರೆದೊಯ್ಯುವಂತೆ ವಿನಂತಿ ಮಾಡಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಹೇಳಿದ್ದಾರೆ.
ಭಾರತವು ಉಕ್ರೇನ್‌ನಿಂದ ಈವರೆಗೆ ಸುಮಾರು 2,000 ನಾಗರಿಕರನ್ನು ಸ್ಥಳಾಂತರಿಸಿದೆ. ಇದರಲ್ಲಿ 1,000 ಮಂದಿಯನ್ನು ಹಂಗೇರಿ ಮತ್ತು ರೊಮೇನಿಯಾದಿಂದ ಚಾರ್ಟರ್ಡ್ ವಿಮಾನಗಳಲ್ಲಿ ಮನೆಗೆ ಕರೆತರಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶ್ರಿಂಗ್ಲಾ ತಿಳಿಸಿದ್ದಾರೆ.