ಕರ್ನಾಟಕ

karnataka

ಶಿವಸೇನಾ ಹೆಸರು, ಚಿಹ್ನೆ ಖರೀದಿಗೆ 2 ಸಾವಿರ ಕೋಟಿ ಡೀಲ್: ಸಂಜಯ್ ರಾವತ್ ಗಂಭೀರ ಆರೋಪ

By

Published : Feb 19, 2023, 4:13 PM IST

ತಮ್ಮ ಪಕ್ಷದ ಹೆಸರು ಹಾಗೂ ಚಿಹ್ನೆ ಖರೀದಿಸಲು 2 ಸಾವಿರ ಕೋಟಿ ರೂ. ವ್ಯವಹಾರ - ಸಂಜಯ್ ರಾವತ್​ ಗಂಭೀರ ಆರೋಪ- ಆರೋಪ ತಳ್ಳಿಹಾಕಿದ ಶಿಂಧೆ ಬಣದ ಶಾಸಕ

Sanjay Raut
ಸಂಜಯ್ ರಾವತ್

ಮುಂಬೈ: ತಮ್ಮ ಶಿವಸೇನೆ ಪಕ್ಷದ ಬಿಲ್ಲು-ಬಾಣ ಚಿಹ್ನೆ ಮತ್ತು ಪಕ್ಷದ ಹೆಸರನ್ನು ಖರೀದಿಸಲು 2000 ಕೋಟಿ ರೂಪಾಯಿಗಳ ಡೀಲ್ ನಡೆದಿದೆ ಎಂದು ಶಿವಸೇನಾ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಮುಖಂಡ ಸಂಜಯ್ ರಾವತ್ ಆರೋಪಿಸಿದ್ದಾರೆ. ರಾವುತ್ ಆರೋಪವನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದ ಶಾಸಕ ಸದಾ ಸರ್ವಂಕರ್ ತಳ್ಳಿ ಹಾಕಿದ್ದಾರೆ. ಸಂಜಯ್ ರಾವತ್ ಕ್ಯಾಷಿಯರ್ ಆಗಿದ್ದಾರಾ ಎಂದು ಅವರು ಪ್ರಶ್ನಿಸಿದ್ದಾರೆ.

2,000 ಕೋಟಿ ರೂಪಾಯಿ ಇದು ಪ್ರಾಥಮಿಕ ಅಂಕಿ ಅಂಶವಾಗಿದೆ ಮತ್ತು ಇದು 100 ಪ್ರತಿಶತ ಸತ್ಯ ಎಂದು ರಾವತ್ ಟ್ವೀಟ್‌ನಲ್ಲಿ ಹೇಳಿದ್ದಾರೆ. ಆಡಳಿತದಲ್ಲಿರುವ ಸರ್ಕಾರಕ್ಕೆ ಹತ್ತಿರವಿರುವ ಬಿಲ್ಡರ್ ಒಬ್ಬರು ಈ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ ಎಂದು ಅವರು ಮಾಧ್ಯಮದವರಿಗೆ ತಿಳಿಸಿದರು. ತಮ್ಮ ಆರೋಪಕ್ಕೆ ಪುರಾವೆ ಇದ್ದು, ಅದನ್ನು ಶೀಘ್ರದಲ್ಲೇ ಬಹಿರಂಗಪಡಿಸುವುದಾಗಿ ಹೊಸ ಬಾಂಬ್​ ಸಿಡಿಸಿದರು.

ಚುನಾವಣಾ ಆಯೋಗವು ಶುಕ್ರವಾರ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿದೆ ಮತ್ತು ಆ ಬಣಕ್ಕೆ 'ಬಿಲ್ಲು ಮತ್ತು ಬಾಣ' ಚುನಾವಣಾ ಚಿಹ್ನೆಯನ್ನು ನೀಡಿ ಆದೇಶ ಹೊರಡಿಸಿದೆ. ಈ ಬಗ್ಗೆ 78 ಪುಟಗಳ ಆದೇಶ ನೀಡಿರುವ ಚುನಾವಣಾ ಆಯೋಗ, ಉದ್ಧವ್ ಠಾಕ್ರೆ ಬಣವು ರಾಜ್ಯದಲ್ಲಿ ಅಸೆಂಬ್ಲಿ ಉಪಚುನಾವಣೆ ಪೂರ್ಣಗೊಳ್ಳುವವರೆಗೆ ತನಗೆ ನಿಗದಿಪಡಿಸಿದ "ಪ್ರಜ್ವಲಿಸುತ್ತಿರುವ ಜ್ಯೋತಿ" ಚುನಾವಣಾ ಚಿಹ್ನೆಯನ್ನು ಬಳಸಲು ಅನುಮತಿಸಿದೆ. ಶಿವಸೇನೆ ಹೆಸರನ್ನು ಖರೀದಿಸಲು 2,000 ಕೋಟಿ ರೂಪಾಯಿ ನೀಡಿದ್ದು ಸಣ್ಣ ಮೊತ್ತವಲ್ಲ, ಚುನಾವಣಾ ಆಯೋಗದ ನಿರ್ಧಾರವು ಒಂದು ಡೀಲ್ ಆಗಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.

ಈ ಡೀಲ್ ನಡೆದಿರುವ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನನ್ನ ಬಳಿ ಇದೆ. ಇದು ಪ್ರಾಥಮಿಕ ಅಂಕಿ ಅಂಶವಾಗಿದೆ ಮತ್ತು 100 ಪ್ರತಿಶತ ಸತ್ಯವಾಗಿದೆ. ಶೀಘ್ರದಲ್ಲೇ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ. ದೇಶದ ಇತಿಹಾಸದಲ್ಲಿ ಹಿಂದೆಂದೂ ಈ ರೀತಿ ನಡೆದಿಲ್ಲ ಎಂದು ರಾವತ್ ಟ್ವೀಟ್ ಮಾಡಿದ್ದಾರೆ.

ವಿರುದ್ಧ ಸಿದ್ಧಾಂತದವರ ಕಾಲು ನೆಕ್ಕುತ್ತಾರೆ ಎಂದು ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಗುರಿಯಾಗಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಾಡಿದ್ದ ಟೀಕೆಯ ಬಗ್ಗೆ ಪ್ರತಿಕ್ರಿಯಿಸಿದ ರಾವತ್, ಸದ್ಯದ ಮುಖ್ಯಮಂತ್ರಿ ಏನು ನೆಕ್ಕುತ್ತಿದ್ದಾರೆ? ಶಾ ಹೇಳುವುದಕ್ಕೆಲ್ಲ ಮಹಾರಾಷ್ಟ್ರದ ಜನತೆ ಮಹತ್ವ ನೀಡುವುದಿಲ್ಲ. ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಹೇಳಲು ಈಗಿನ ಮುಖ್ಯಮಂತ್ರಿಗೆ ಯಾವುದೇ ಹಕ್ಕಿಲ್ಲ ಎಂದು ಹರಿಹಾಯ್ದರು.

ತಮಗೆ ವಿರುದ್ಧವಾದ ವಿಚಾರಧಾರೆಗಳಿರುವವರ ಕಾಲು ನೆಕ್ಕಲು ನಿರ್ಧರಿಸಿದವರು ಸತ್ಯ ಯಾವ ಕಡೆ ಇದೆ ಎಂಬುದನ್ನು ಈಗ ಕಂಡುಕೊಂಡಿದ್ದಾರೆ ಎಂದು ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಚುನಾವಣಾ ಆಯೋಗ ಘೋಷಿಸಿದ ಬಳಿಕ ಕೇಂದ್ರ ಸಚಿವ ಶಾ ಶನಿವಾರ ಹೇಳಿದ್ದರು. ಉದ್ಧವ್ ಠಾಕ್ರೆ ಅವರನ್ನು ಹೆಸರಿಸದೆ 2019 ರ ವಿಧಾನಸಭೆ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಸ್ಥಾನ ಹಂಚಿಕೊಳ್ಳುವ ಬಗ್ಗೆ ಯಾವುದೇ ಒಪ್ಪಂದ ಆಗಿರಲಿಲ್ಲ ಎಂದು ಶಾ ಪುನರುಚ್ಚರಿಸಿದ್ದರು. 2019 ರ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಶಿವಸೇನೆಯು ಭಾರತೀಯ ಜನತಾ ಪಕ್ಷದೊಂದಿಗೆ ತನ್ನ ಮೈತ್ರಿ ಮುರಿದುಕೊಂಡಿತ್ತು.

ಇದನ್ನೂ ಓದಿ: ಸಂಜಯ್​ ರಾವುತ್​ಗೆ ಜಾಮೀನು.. ಇಡಿ ಅರ್ಜಿ ವಜಾ ಮಾಡಿದ ಹೈಕೋರ್ಟ್​.. ಶಿವಸೇನಾ ನಾಯಕ ರಿಲೀಸ್​​

ABOUT THE AUTHOR

...view details