ಕೊರೊನಾ ಬಳಿಕ ಇದೀಗ ಮಂಕಿಪಾಕ್ಸ್ ವೈರಸ್ ವಿಶ್ವದಾದ್ಯಂತ ಆತಂಕ ಮೂಡಿಸುತ್ತಿದೆ. ಈಗಾಗಲೇ ಮಂಕಿಪಾಕ್ಸ್ 20ಕ್ಕೂ ಹೆಚ್ಚು ದೇಶಗಳಿಗೆ ಹರಡಿದ್ದು, 200 ಪ್ರಕರಣ ದೃಢಪಟ್ಟಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಹೆಚ್‌ಒ) ತಿಳಿಸಿದೆ. ಮಂಕಿಪಾಕ್ಸ್ ವೈರಸ್ ದಂಶಕಗಳು ಹಾಗೂ ಮಂಗಗಳಂತಹ ಕಾಡು ಪ್ರಾಣಿಗಳಲ್ಲಿ ಹುಟ್ಟುತ್ತದೆ. ಸಾಂದರ್ಭಿಕವಾಗಿ ಜನರಿಗೂ ಹರಡುವ ವೈರಸ್ ಇದಾಗಿದ್ದು, ಸಿಡುಬಿನ ಜಾತಿಗೆ ಸೇರುತ್ತದೆ.
ಏನಿದು ಮಂಕಿಪಾಕ್ಸ್?:ಮಧ್ಯ ಹಾಗೂ ಪಶ್ಚಿಮ ಆಫ್ರಿಕಾದಲ್ಲಿ ಮಂಕಿಪಾಕ್ಸ್ ಪ್ರಕರಣ ಹೆಚ್ಚಾಗಿ ಕಂಡು ಬಂದಿವೆ. 1958ರಲ್ಲಿ ಇದನ್ನು ಮೊದಲ ಬಾರಿಗೆ ಮಂಗಗಳಲ್ಲಿ ಕಂಡು ಹಿಡಿಯಲಾಗಿತ್ತು. ಹೀಗಾಗಿ, ಇದಕ್ಕೆ ಮಂಕಿಪಾಕ್ಸ್ ಎಂದು ಹೆಸರಿಡಲಾಗಿದೆ. 1970ರಲ್ಲಿ ಮೊದಲ ಬಾರಿಗೆ ಕಾಂಗೋದ ಬಾಲಕನಲ್ಲಿ ರೋಗ ಪತ್ತೆಯಾಗಿತ್ತು.