ಬಲ್ಲಿಯಾ (ಉತ್ತರ ಪ್ರದೇಶ) :ಎರಡು ದಶಕಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದರಲ್ಲಿ ಈಗ ನ್ಯಾಯಾಲಯದ ತೀರ್ಪು ಬಂದಿದ್ದು, 6 ಜನರಿಗೆ ಶಿಕ್ಷೆ ವಿಧಿಸಲಾಗಿದೆ. 20 ವರ್ಷಗಳ ಹಿಂದೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅಪರಾಧಿಗಳೆಂದು ಸಾಬೀತಾದ ಇಬ್ಬರು ದಂಪತಿಗಳು ಸೇರಿದಂತೆ ಆರು ಮಂದಿಗೆ ಇಲ್ಲಿನ ಸ್ಥಳೀಯ ನ್ಯಾಯಾಲಯವೊಂದು ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ನ್ಯಾಯಾಲಯವು ಪ್ರತಿಯೊಬ್ಬರಿಗೂ ತಲಾ 11,200 ರೂ.ಗಳ ದಂಡವನ್ನೂ ವಿಧಿಸಿದೆ ಎಂದು ಅವರು ಹೇಳಿದರು. ಸಹತ್ವಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಿತ್ವಿಸಾನ್ವ್ ಖುರ್ದ್ ಹೆಸರಿನ ಗ್ರಾಮದಲ್ಲಿ 2003ರ ಅಕ್ಟೋಬರ್ 31ರಂದು ಈ ಘಟನೆ ನಡೆದಿತ್ತು. ಭೂ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಓರ್ವ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್. ಆನಂದ್ ಹಿಂದೆ ನಡೆದ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು.
ಮೃತ ರಾಮ್ ನಾರಾಯಣ್ ಗೊಂಡ್ ಅವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಶಿವ ಕುಮಾರ್ ಗುಪ್ತಾ ಮತ್ತು ಅವರ ಪತ್ನಿ ಪಾರ್ವತಿ ದೇವಿ, ಛೋಟೇಲಾಲ್ ಗುಪ್ತಾ, ಮದನ್ ಗುಪ್ತಾ ಮತ್ತು ಅವರ ಪತ್ನಿ ಸುನೀತಾ ದೇವಿ ಮತ್ತು ಗಣೇಶ್ ಗುಪ್ತಾ ಎಂಬುವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು ಎಂದು ಎಸ್ಪಿ ತಿಳಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹುಸೇನ್ ಅಹ್ಮದ್ ಅನ್ಸಾರಿ ಅವರು ಶುಕ್ರವಾರ ಆರು ಆರೋಪಿಗಳನ್ನು ತಪ್ಪಿತಸ್ಥರೆಂದು ಘೋಷಿಸಿ, ಅವರಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 11,200 ರೂ. ದಂಡ ವಿಧಿಸಿದ್ದಾರೆ.
ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಅಪರಾಧ ಸಾಬೀತು: ಬಿಹಾರ ಮೂಲದ ಐದು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಏಕೈಕ ಆರೋಪಿಯನ್ನು ಇಲ್ಲಿನ ಕೇರಳದ ಕೊಚ್ಚಿಯಲ್ಲಿನ ಪೋಕ್ಸೊ ನ್ಯಾಯಾಲಯ ಶನಿವಾರ ದೋಷಿ ಎಂದು ಘೋಷಿಸಿದೆ. ವಿಶೇಷ ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯದ ನ್ಯಾಯಾಧೀಶ ಕೆ. ಸೋಮನ್ ಅವರು ಬಿಹಾರದ ವಲಸೆ ಕಾರ್ಮಿಕ ಅಶ್ವಾಕ್ ಆಲಂ ಎಂಬಾತನನ್ನು ದೋಷಿ ಎಂದು ಘೋಷಿಸಿದರು. ಆರೋಪಿಯು ಎಲ್ಲಾ ಅಪರಾಧಗಳಲ್ಲಿ ತಪ್ಪಿತಸ್ಥನೆಂದು ಕಂಡುಬಂದಿದೆ ಎಂದು ಹೇಳಿದ ನ್ಯಾಯಾಧೀಶರು ನವೆಂಬರ್ 9 ರಂದು ಶಿಕ್ಷೆಯ ಪ್ರಮಾಣವನ್ನು ಘೋಷಿಸುವುದಾಗಿ ತಿಳಿಸಿದ್ದಾರೆ.
ಪ್ರಾಸಿಕ್ಯೂಷನ್ ಪ್ರಕಾರ, ಜುಲೈ 28 ರಂದು ಸಂತ್ರಸ್ತೆ ವಾಸಿಸುತ್ತಿದ್ದ ಕಟ್ಟಡದಲ್ಲೇ ವಾಸವಾಗಿದ್ದ ಆಲಂ ಐದು ವರ್ಷದ ಬಾಲಕಿಯನ್ನು ಅಪಹರಿಸಿ, ಕ್ರೂರವಾಗಿ ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ, ಜುಲೈ 29 ರಂದು ಹತ್ತಿರದ ಅಲುವಾ ಪ್ರದೇಶದ ಸ್ಥಳೀಯ ಮಾರುಕಟ್ಟೆಯ ಹಿಂಭಾಗದ ಜೌಗು ನೀರಿನ ಪ್ರದೇಶದಲ್ಲಿ ಆಕೆಯ ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಎಸೆಯಲಾಗಿತ್ತು. ಘಟನೆ ನಡೆದ 99 ದಿನಗಳೊಳಗೆ ನ್ಯಾಯಾಲಯದ ತೀರ್ಪು ಪ್ರಕಟವಾಗಿರುವುದು ಗಮನಾರ್ಹ
ಇದನ್ನೂ ಓದಿ : ಕೌಟುಂಬಿಕ ಕಲಹ, ಯುವಕ ಆತ್ಮಹತ್ಯೆ; ಹುಬ್ಬಳ್ಳಿಯಲ್ಲಿ ಇನ್ಸ್ಪೆಕ್ಟರ್ ಸೇರಿ 8 ಜನರ ವಿರುದ್ಧ ಕೇಸ್