ಬಿಜ್ನೋರ್(ಉತ್ತರ ಪ್ರದೇಶ):20 ವರ್ಷದ ಯುವತಿಯೋರ್ವಳ ಮೇಲೆ ಅವಳ ಇಬ್ಬರು ಸ್ನೇಹಿತರು ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ. ಯುವತಿಯ ಇಬ್ಬರು ಸ್ನೇಹಿತರು ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಮಿಶ್ರಣ ಮಾಡಿ, ಆಕೆಯ ಮೇಲೆ ದುಷ್ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳನ್ನ ಉಮರ್ ಹಾಗೂ ಅಬ್ದುಲ್ ಎಂದು ಗುರುತಿಸಲಾಗಿದೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ 19ರ ತಡರಾತ್ರಿ 12 ಗಂಟೆಗೆ ಈ ಘಟನೆ ನಡೆದಿದೆ. ಹಾಸ್ಟೇಲ್ನಲ್ಲಿ ವಾಸವಾಗಿದ್ದ ಯುವತಿಗೆ ಫೋನ್ ಮಾಡಿರುವ ಉಮರ್, ಸಹೋದರಿ ಹುಟ್ಟುಹಬ್ಬ ಆಚರಣೆ ಮಾಡಲು ಬರುವಂತೆ ಮನವಿ ಮಾಡಿದ್ದಾನೆ. ಆತನ ಮಾತು ಕೇಳಿದ ಸಂತ್ರಸ್ತೆ ಕಾರಿನಲ್ಲಿ ಹತ್ತಿಕೊಂಡಿದ್ದಾಳೆ.
ಇದರ ಬೆನ್ನಲ್ಲೇ ಅಬ್ದುಲ್ ಕೂಡ ಕಾರಿನಲ್ಲಿ ಹತ್ತಿಕೊಂಡಿದ್ದು, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾರೆ. ಘಟನೆ ಬಗ್ಗೆ ಪೊಲೀಸರು ಹಾಗೂ ಕುಟುಂಬಸ್ಥರ ಮುಂದೆ ಹೇಳದಂತೆ ಬೆದರಿಕೆ ಹಾಕಿದ್ದು, ಹಾಸ್ಟೇಲ್ ಪಕ್ಕ ಬಿಟ್ಟು ತೆರಳಿದ್ದಾರೆ.