ರೇವಾರಿ: ಗಣರಾಜ್ಯೋತ್ಸವದಂದು ಕೆಂಪುಕೋಟೆಯಲ್ಲಿ ಪ್ರತಿಭಟನಾಕಾರರು ನಡೆಸಿದ ಹಿಂಸಾತ್ಮಕ ಘಟನೆ ದೇಶಾದ್ಯಂತ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೆ ಈ ಘಟನೆಯನ್ನು ಸ್ವತಃ ರೈತರೇ ತೀವ್ರವಾಗಿ ವಿರೋಧಿಸುತ್ತಿದ್ದಾರೆ.
ಇಲ್ಲಿನ ಡುಂಗಾರ್ವಾಸ್ ಗ್ರಾಮದ ಜನರು ರೈತರ ಪ್ರತಿಭಟನೆಯಿಂದ ಬೇಸತ್ತಿದ್ದು, 24 ಗಂಟೆಗಳಲ್ಲಿ ಪ್ರತಿಭಟನಾಕಾರರು ಜಾಗ ಖಾಲಿ ಮಾಡುವಂತೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ರೈತ ಚಳವಳಿಯಿಂದ ನೊಂದ ಸ್ಥಳೀಯರು: ಪ್ರತಿಭಟನಾಕಾರರಿಗೆ ವಾರ್ನಿಂಗ್ ದೆಹಲಿ-ಜೈಪುರ ಹೆದ್ದಾರಿ-48ರಲ್ಲಿ ಸುಮಾರು ಒಂದೂವರೆ ತಿಂಗನಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಬುಧವಾರ ಈ ಸ್ಥಳಕ್ಕೆ ಭೇಟಿ ನೀಡಿದ ಗ್ರಾಮಸ್ಥರು ಜಾಗ ಖಾಲಿ ಮಾಡುವಂತೆ ಎಚ್ಚರಿಸಿದ್ದಾರೆ. ಖಾಲಿ ಮಾಡದಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದು ತಿಳಿಸಿದ್ದಾರೆ. ಈ ಮಾತಿನ ಚಕಮಕಿ ನಡುವೆ ಪೊಲೀಸರು ಮಧ್ಯಪ್ರವೇಶಿಸಿ ಉದ್ವಿಗ್ನತೆಯನ್ನು ತಡೆದಿದ್ದಾರೆ.
ಒಂದೂವರೆ ತಿಂಗಳಿನಿಂದ ನಡೆದ ಪ್ರತಿಭಟನೆಯಿಂದಾಗಿ ಈ ಪ್ರದೇಶದಲ್ಲಿ ಸರಿಯಾದ ವಿದ್ಯುತ್ ಇಲ್ಲವಂತೆ. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮದ ಪರಿಸ್ಥಿತಿ ಹದಗೆಟ್ಟಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.