ಸೂರತ್ (ಗುಜರಾತ್): ತಾಲೂಕಿನ ಆಲ್‌ಪಾಡ್ ಸಮೀಪದ ಕಡಲತೀರದಲ್ಲಿ ಭಾರೀ ಗಾತ್ರದ ತಿಮಿಂಗಲ ಪತ್ತೆಯಾಗಿದೆ. ಆಲ್‌ಪಾಡ್ ಕಡಲತೀರದ ಗ್ರಾಮವಾಗಿದ್ದು ಬೃಹದಾಕಾರದ ಮೀನುಗಳಿವೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದರು. ಆದರೆ, ಎಂದೂ ನೋಡಿರಲಿಲ್ಲ. ಅರಬ್ಬೀ ಸಮುದ್ರದಿಂದ ದಡಕ್ಕೆ ಹೊರಬಿದ್ದ ಈ ಬೃಹತ್ ಗಾತ್ರದ ಈ ಮೀನು ಕಂಡು ಆಶ್ಚರ್ಯಚಕಿತರಾದರು. ಅಲ್ಲದೇ ಅನುಮಾನ ನಿಜವಾಗಿದ್ದಕ್ಕೆ ಕೆಲವರು ಆ ಮೀನಿನ ಜೊತೆಗೆ ಫೋಟೋ ಹಾಗೂ ವಿಡಿಯೋ ಮಾಡಿಕೊಂಡರು. ಅದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿವೆ.
ಆಲ್‌ಪಾಡ್ ಸಮೀಪದ ಮೋರ್ ಎಂಬ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಸಮುದ್ರದ ಅಲೆಯ ಹೊಡೆತಕ್ಕೆ ಈ ಮೀನು ದಡಕ್ಕೆ ಬಂದಿದೆ. ಸುಮಾರು 20 ಅಡಿ ಉದ್ದದ ಜೀವಂತ ತಿಮಿಂಗಲ ಇದಾಗಿದ್ದು, ಮೊದಲ ಬಾರಿ ಈ ಗಾತ್ರದ ಮೀನು ಕಂಡು ಸ್ಥಳೀಯರು ಕೂಡ ಬೆಚ್ಚಿಬಿದ್ದಿದ್ದಾರೆ. ಮೀನುಗಾರಿಕೆಗೆ ತೆರಳಿದ್ದ ಯುವಕರು ಸಂಜೆ ಮನೆಗೆ ವಾಪಸಾಗುತ್ತಿದ್ದಾಗ ಕಡಲತೀರದಲ್ಲಿ ಈ ಜೀವಂತ ಮೀನು ಪ್ರತ್ಯಕ್ಷವಾಗಿದ್ದು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಆಲ್‌ಪಾಡ್ ಅರಣ್ಯ ಇಲಾಖೆ ಅದನ್ನು ಮತ್ತೆ ಸಮುದ್ರಕ್ಕೆ ಕಳಿಸುವ ಯತ್ನ ಮಾಡಿದರು. ನೀರು ಕಡಿಮೆ ಇದ್ದುದರಿಂದ ದಡದಲ್ಲಿದ್ದ ಮೀನು ಜೀವ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿತ್ತು. ಅದನ್ನು ಕಂಡ ಅಲ್ಲಿದ್ದ ನೂರಾರು ಮೀನುಗಾರರು, ಅದಕ್ಕೆ ನೀರು ಹಾಕಿ ಜೀವ ಉಳಿಸುವ ಕೆಲಸ ಮಾಡಿದರು. ''ಎಲ್ಲರ ಸಹಕಾರದಿಂದ ಈ ಬೃಹತ್ ತಿಮಿಂಗಲವನ್ನು ಮತ್ತೆ ಸಮುದ್ರಕ್ಕೆ ಸೇರಿಸಲಾಗುವುದು'' ಎಂದು ಅರಣ್ಯ ಇಲಾಖೆಯ ದೀಪಕ್ ಪಟೇಲ್ ಮಾಹಿತಿ ನೀಡಿದ್ದಾರೆ.