ಶ್ರೀನಗರ: ಕಳೆದ ಹಲವಾರು ದಿನಗಳಿಂದ ಜಮ್ಮು- ಕಾಶ್ಮೀರದಲ್ಲಿ ಉಗ್ರರು ಮತ್ತು ಸೇನೆ ಮಧ್ಯೆ ಗುಂಡಿನ ಚಕಮಕಿ ನಡೆಯುತ್ತಲೇ ಇದೆ. ಪೊಲೀಸರು ಮತ್ತು ಯೋಧರು ನಡೆಸುತ್ತಿರುವ ಉಗ್ರರ ಶೋಧ ಕಾರ್ಯಾಚರಣೆ ವೇಳೆ ಗುಂಡಿನ ದಾಳಿ ನಡೆದಿರುವ ಘಟನೆ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಮಿಟ್ರಿಗಾಮ್ ಪ್ರದೇಶದಲ್ಲಿ ನಡೆದಿದೆ.
ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದು, ಒಬ್ಬ ಯೋಧ ಗಾಯಗೊಂಡಿದ್ದಾರೆ. ಇಲ್ಲಿನ ನಡೆಯುತ್ತಿದ್ದ ಜಂಟಿ ಕಾರ್ಯಾಚರಣೆ ಮುಗಿದಿದೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಓದಿ:ಪುಲ್ವಾಮಾ ಉಗ್ರರ ದಾಳಿಗೆ ಆರ್ಪಿಎಫ್ ಸಿಬ್ಬಂದಿ ಹುತಾತ್ಮ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಜಂಟಿ ಕಾರ್ಯಾಚರಣೆ ವೇಳೆ ಎರಡರಿಂದ ಮೂರು ಭಯೋತ್ಪಾದಕರ ಗುಂಪೊಂದು ಸೇನೆ ಮೇಲೆ ಗುಂಡಿನ ದಾಳಿ ನಡೆಸಿದೆ. ಉಗ್ರರ ದಾಳಿ ಪ್ರತ್ಯುತ್ತರ ನೀಡುತ್ತಲೇ ಸಂಭವಿಸಬಹುದಾದ ಹಾನಿಯನ್ನು ತಡೆಗಟ್ಟುವುದು ಮತ್ತು ನಾಗರಿಕರನ್ನು ಸ್ಥಳಾಂತರಿಸುವುದಕ್ಕೆ ಆದ್ಯತೆ ನೀಡಿತ್ತು ಎಂದು ಪೊಲೀಸರು ಅಧಿಕಾರಿ ಹೇಳಿದ್ದಾರೆ.
ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ತಂಡವು ಉಗ್ರರ ಅಡಗು ತಾಣವನ್ನು ಸುತ್ತುವರಿದರು. ಬಳಿಕ ನಡೆದ ಗುಂಡಿನ ದಾಳಿಯಲ್ಲಿ ಸೇನೆ ಇಬ್ಬರು ಉಗ್ರರನ್ನು ಹೊಡೆದುರುಳಿಸಿದರು. ಈ ದಾಳಿಯಲ್ಲಿ ನಮ್ಮ ಸೇನೆಯ ಯೋಧರೊಬ್ಬರಿಗೆ ಗುಂಡೇಟು ಬಿದ್ದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.