ಕುಲ್ಗಾಮ್:ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಚಿಮ್ಮರ್ ಪ್ರದೇಶದಲ್ಲಿ ಬುಧವಾರ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಅಪರಿಚಿತ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ.
ಈ ಪ್ರದೇಶದಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿ ಆಧಾರದ ಮೇಲೆ ಪೊಲೀಸ್ ಮತ್ತು ಸೇನೆಯ ಜಂಟಿ ತಂಡವು ಶೋಧ ಕಾರ್ಯಾಚರಣೆ ನಡೆಸಿದ್ದು, ಮೂವರು ಉಗ್ರರನ್ನು ಸದೆಬಡಿದಿದೆ ಹಾಗೂ ಮತ್ತೊಬ್ಬ ಅಪರಿಚಿತ ಭಯೋತ್ಪಾದಕ ಸೇನೆಗೆ ಶರಣಾಗಿದ್ದಾನೆ.
ಇನ್ನು ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಶಂಕಿತ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿ ವೇಳೆ ಓರ್ವ ಸೈನಿಕ ಗಾಯಗೊಂಡಿದ್ದರು. ಮಂಗಳವಾರ ಮತ್ತು ಬುಧವಾರ ಮಧ್ಯರಾತ್ರಿ ದಾದಲ್ ಗ್ರಾಮದಲ್ಲಿ ಶೋಧ ಕಾರ್ಯಾಚರಣೆ ವೇಳೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳ ಅನುಮಾನಾಸ್ಪದ ಓಡಾಟದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಎಲ್‌ಒಸಿ ಬಳಿಯ ಗ್ರಾಮ ಮತ್ತು ಪಕ್ಕದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಲಾಯ್ತು ಎಂದು ಅಧಿಕಾರಿಗಳು ಹೇಳಿದರು. ನಂತರ ಉಗ್ರರ ಗುಂಪನ್ನು ಪತ್ತೆ ಹಚ್ಚಲಾಯಿತು. ಭಯೋತ್ಪಾದಕರನ್ನು ಹುಟ್ಟಡಗಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.