ಹಂದ್ವಾರ (ಜಮ್ಮು- ಕಾಶ್ಮೀರ) :ರಾಷ್ಟ್ರ ವಿರೋಧಿ ಚಟುವಟಿಕೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ, ಬಾರಾಮುಲ್ಲಾ ಹಂದ್ವಾರದ ಕಚ್ಲೂ ಕ್ರಾಸಿಂಗ್‌ನಲ್ಲಿ ಪೊಲೀಸರೊಂದಿಗೆ ನಾಕಾಬಂಧಿ ಹಾಕಿದ ಸಿಆರ್ಪಿಎಫ್ ಯೋಧರು ತಪಾಸಣೆ ಕೈಗೊಂಡಿದ್ದರು. ಈ ವೇಳೆ ಭದ್ರತಾ ಪಡೆಗಳನ್ನು ನೋಡಿ ಬೈಕ್ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ಮೂವರನ್ನು ಬಂಧಿಸಿಲಾಗಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಬಂಧಿತ ವ್ಯಕ್ತಿಗಳು ಕುಪ್ವಾರಾ ಜಿಲ್ಲೆಯ ಕಚ್ಲೂ ಗ್ರಾಮದ ನಿವಾಸಿಗಳಾದ ಮೊಹಮ್ಮದ್ ಯಾಸೀನ್ ರಾಥರ್, ಶೌಕತ್ ಅಹ್ಮದ್ ಗನಿ ಮತ್ತು ಜಿ ಹೆಚ್ ನಬಿ ರಾಥರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಶಸ್ತ್ರಾಸ್ತ್ರ, ಮದ್ದು-ಗುಂಡುಗಳು ಮತ್ತು ಭಯೋತ್ಪಾದಕ ಸಂಘಟನೆ ಅಲ್-ಬದರ್ನ ಲೆಟರ್ ಪ್ಯಾಡ್ ವಶಪಡಿಸಿಕೊಳ್ಳಲಾಗಿದೆ.
ಓದಿ : ಸಿನಿಮಾದಲ್ಲಿನ ದೃಶ್ಯಕ್ಕಿಂತಲೂ ಭೀಕರ ಈ ಆಕ್ಸಿಡೆಂಟ್.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಇವರು ಉಗ್ರಗಾಮಿ ಸಂಘಟನೆ ಅಲ್-ಬದರ್ನ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ. ಇವರು, ಭಯೋತ್ಪಾದಕರಿಗೆ ಆಹಾರ, ವಸತಿ ಸುರಕ್ಷಿತವಾಗಿ ಸಂಚರಿಸಲು ಮಾರ್ಗಗಳನ್ನು ಗುರುತಿಸುವುದು ಸೇರಿ ಇತರ ವ್ಯವಸ್ಥೆಗಳನ್ನು ಮಾಡಿಕೊಡುತ್ತಿದ್ದರು.
ಅಲ್ಲದೆ, ಉಗ್ರಗಾಮಿಗಳ ಜಾಲ ವಿಸ್ತರಿಸಲು ಸಹಾಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳ ವಿರುದ್ಧ ಕ್ರಾಲ್ಗುಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಇನ್ನೂ ಇಬ್ಬರು ಅಲ್- ಬದರ್ ಉಗ್ರ ಸಂಘಟನೆ ಸೇರಿದ್ದಾರೆ ಮತ್ತು ಹಂದ್ವಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಗಳು ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ. ಹಾಗಾಗಿ, ಸಿಆರ್ಪಿಎಫ್ ಪಡೆ ಹಂದ್ವಾರದ ಬದರ್ಕಲಿಯ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಕೈಗೊಂಡಿದೆ.