ಕರ್ನಾಟಕ

karnataka

ETV Bharat / bharat

ಕಷ್ಟಪಟ್ಟು ದುಡಿದು ಕೂಡಿಟ್ಟಿದ್ದ 2 ಲಕ್ಷ ರೂಪಾಯಿ ನೋಟುಗಳನ್ನು ತಿಂದು ಹಾಕಿದ ಇಲಿ! - rat eaten money Notes

ವಾಚ್​ಮ್ಯಾನ್​ ಕೆಲಸ ಮಾಡಿ ಕೂಡಿಟ್ಟಿದ್ದ ಹಣವನ್ನು ಇಲಿಯೊಂದು ತಿಂದು ಹಾಕಿದೆ. ಬಡತನ ಎಂಬ ಗಾಯದ ಮೇಲೆ ಮೂಸಿಕ ಬರೆ ಎಳೆದಿದೆ.

ನೋಟುಗಳನ್ನು ತಿಂದು ಹಾಕಿದ ಇಲಿ
ನೋಟುಗಳನ್ನು ತಿಂದು ಹಾಕಿದ ಇಲಿ

By ETV Bharat Karnataka Team

Published : Dec 12, 2023, 3:28 PM IST

ಹೈದರಾಬಾದ್:ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ಅಂತಾರೆ. ಆದರೆ, ಇಲ್ಲಿ ಅದು ಉಲ್ಟಾ ಆಗಿದೆ. ಶ್ರಮ ವಹಿಸಿ ದುಡಿದು ಕೂಡಿಟ್ಟಿದ್ದ 2 ಲಕ್ಷ ರೂಪಾಯಿ ಹಣವನ್ನು ಇಲಿಯೊಂದು ತಿಂದು ಹಾಕಿದೆ. ಮೊದಲೇ ಹೇಳಿ ಕೇಳಿ ಬಡತನ. ಈಗ ಮೂಸಿಕ ನೀಡಿದ ಆಘಾತಕ್ಕೆ ಕುಟುಂಬ ತಲ್ಲಣಿಸಿದೆ. ಅರ್ಧಂಬರ್ಧ ನೋಟುಗಳನ್ನು ಪಡೆಯಲು ಬ್ಯಾಂಕ್​ ಕೂಡ ಸುತಾರಾಂ ಒಪ್ಪುತ್ತಿಲ್ಲ.

ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಪರಿಗಿರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಲೀಲಾ ಇಲಿಯಿಂದ ನಷ್ಟಕ್ಕೀಡಾದ ಮಹಿಳೆ. ಕೊರೊನಾ ವೇಳೆ ಪತಿ ಮೃತಪಟ್ಟಿದ್ದ. ಇದಾದ ಬಳಿಕ ಆಕೆಯ ಹೆಗಲ ಮೇಲೆ ಇಡೀ ಕುಟುಂಬದ ಹೊಣೆ ಬಿದ್ದಿತು. ಈಕೆಗೆ ಓರ್ವ ಮಗಳಿದ್ದಾರೆ. 10 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ವಾಚ್​​ಮ್ಯಾನ್​ ಆಗಿ ಕೆಲಸ ಮಾಡವ ಶಿವಲೀಲಾ ಬಂದ ಸಂಬಳದಲ್ಲಿ ಇಂತಿಷ್ಟು ಹಣವನ್ನು ಭವಿಷ್ಯಕ್ಕಾಗಿ ಕೂಡಿಟ್ಟಿದ್ದಳು. ಆದರೆ, ಮೂಸಿಕನ ದಾಳಿಗೆ ಭವಿಷ್ಯವೇ ಮಸುಕಾಗಿದೆ.

ಹೇಗಾಯ್ತು?:ವಾಚ್​​ಮ್ಯಾನ್​ ಆಗಿ ಕೆಲಸ ಮಾಡುವ ಶಿವಲೀಲಾ ಅವರು ಕಳೆದೆಂಟು ತಿಂಗಳಿನಿಂದ ಪೈಸಾ ಪೈಸಾ ಕೂಡಿಟ್ಟು 2 ಲಕ್ಷ ರೂಪಾಯಿ ಹೊಂದಿಸಿದ್ದರು. ತಾವಿದ್ದ ಗುಡಿಸಲಿನಲ್ಲಿ ಅಕ್ಕಿ ಮೂಟೆಯ ಸಂದಿನೊಳಗೆ ಈ ಹಣವನ್ನು ಬಚ್ಚಿಟ್ಟಿದ್ದರು. ಹಲವು ದಿನಗಳಿಂದ ಹಣದ ಕಡೆ ಗಮನ ನೀಡಿರಲಿಲ್ಲ. ಸೋಮವಾರದಂದು ಮೂಟೆಯಲ್ಲಿದ್ದ ಅಕ್ಕಿ ತೆಗೆಯುವ ವೇಳೆ ಹಣವನ್ನು ನೋಡಿದ್ದಾರೆ. ಆಗಲೇ ನೋಡಿ ಆಕೆಗೆ ಮಿಂಚು ಹೊಡೆದಂತಾಗಿದೆ. ಅಕ್ಕಿಯ ಜೊತೆಗಿಟ್ಟಿದ್ದ 2 ಲಕ್ಷ ರೂಪಾಯಿ ನೋಟುಗಳನ್ನು ನುಸಿ ಮತ್ತು ಇಲಿ ತಿಂದು ಹಾಕಿವೆ. ಚೀಲದಲ್ಲಿ ನೋಟಿನ ಚೂರುಗಳು ಸಿಕ್ಕಿವೆ. ಇದನ್ನು ಕಂಡ ಶಿವಲೀಲಾ ಅವರಿಗೆ ಆಕಾಶವೇ ತಲೆಮೇಲೆ ಬಿದ್ದಂತಾಗಿದೆ.

ಹಣದ ಚೂರು ಪಡೆಯಲು ಬ್ಯಾಂಕ್​ ನಿರಾಕರಣೆ:ಇಲಿಯ ದಾಳಿಗೆ ನೋಟುಗಳು ಛಿದ್ರವಾಗಿದ್ದವು. ಚೂರು ಪಾರು ಉಳಿದ ನೋಟನ್ನು ತೆಗೆದುಕೊಂಡು ಬ್ಯಾಂಕ್​ಗಳಿಗೆ ಅಲೆದಾಡಿದ್ದಾರೆ. ಆದರೆ, ಬ್ಯಾಂಕ್​ ಸಿಬ್ಬಂದಿ ಹಾಳಾದ ನೋಟುಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದ ದಿಕ್ಕು ತೋಚದ ಶಿವಲೀಲಾ ಅವರು, ಬೇಗಂಪೇಟೆಯ ಪ್ರಜಾದರ್ಬಾರ್ ಹಾಲ್​ನ ಮುಂದೆ ಧರಣಿ ಕೂತಿದ್ದಾರೆ. ತಮಗೆ ನಷ್ಟವಾಗಿದೆ. ಗುಡಿಸಲಿನಲ್ಲಿ ವಾಸಿಸುತ್ತಿದ್ದು, ಮನೆ ನಿರ್ಮಾಣಕ್ಕೆ ಕೂಡಿಟ್ಟಿದ್ದ ಹಣ ಇಲಿ ಪಾಲಾಗಿದೆ. ತಮಗೆ ಸರ್ಕಾರ ಮನೆ ಮಂಜೂರು ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕೇಸ್​​ ಹಾಕಬೇಕಿರುವುದು ತ್ರಿಶಾ; ಮನ್ಸೂರ್ ಅಲಿ ಖಾನ್​ಗೆ ಕೋರ್ಟ್ ಛೀಮಾರಿ!

ABOUT THE AUTHOR

...view details