ವಾರಣಾಸಿ: ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯ ಕಾಶಿ ವಿಶ್ವನಾಥ್ ಕಾರಿಡಾರ್‌ನಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ವೇಳೆ ಶಿಥಿಲವಾದ ಕಟ್ಟಡ ಕುಸಿದಿದೆ. ಘಟನೆ ಸಂಬಂಧ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ.
ಕಾರಿಡಾರ್ ಯೋಜನೆಗಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಾತ್ಕಾಲಿಕವಾಗಿ ಎರಡು ಅಂತಸ್ತಿನ ಮನೆಯಲ್ಲಿ ವಾಸಿಸುತ್ತಿದ್ದರು. ಇದು ಹಳೆಯದಾದ ಹಾಗೂ ಶಿಥಿಲಗೊಂಡಿದ್ದ ಪರಿಣಾಮ ಕುಸಿದಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಕಾರ್ಮಿಕರನ್ನು ಕೂಡಲೇ ಶಿವಪ್ರಸಾದ್ ಗುಪ್ತಾ ವಿಭಾಗೀಯ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಾವನ್ನಪ್ಪಿದ ಇಬ್ಬರು ಕಾರ್ಮಿಕರು ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯವರು ಎಂದು ತಿಳಿದು ಬಂದಿದೆ.
ಆರು ಕಾರ್ಮಿಕರನ್ನು ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಲಾಗಿದೆ. ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿದ್ದ ಅಬ್ದುಲ್ ಜಬ್ಬರ್ ಇನ್ನೂ ಆಸ್ಪತ್ರೆಯಲ್ಲಿದ್ದಾನೆ. ದಶಾಶ್ವಾಮೆದ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಕಾರಿಡಾರ್‌ಗಾಗಿ ನಡೆಯುತ್ತಿರುವ ಕಾರ್ಯದಿಂದಾಗಿ ಕಟ್ಟಡದ ಅಡಿಪಾಯ ದುರ್ಬಲಗೊಂಡು ಈ ಅನಾಹುತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಕಾಶಿ ವಿಶ್ವನಾಥ್ ಕಾರಿಡಾರ್‌ನಲ್ಲಿ 10 ದಿನಗಳಲ್ಲಿ ಇದು 2ನೇ ಘಟನೆಯಾಗಿದೆ. ಮೇ 23ರಂದು ಲಾಹೋರಿ ಟೋಲಾ ಪ್ರದೇಶದ ಬಳಿ ಮೂರು ಅಂತಸ್ತಿನ ಮನೆಯ ಛಾವಣಿ ಕುಸಿದು ಐದು ಜನರು ಗಾಯಗೊಂಡಿದ್ದರು. ಕಾರಿಡಾರ್ ಯೋಜನೆಯ ಸುತ್ತಮುತ್ತಲಿನ ಹಲವಾರು ಮನೆಗಳು ದಶಕಗಳಷ್ಟು ಹಳೆಯವಾಗಿದ್ದು, ಕಾಮಕಾರಿ ಹಿನ್ನೆಲೆ ಮತ್ತಷ್ಟು ಕಟ್ಟಡಗಳು ಕುಸಿಯುವ ಶಂಕೆ ಇದೆ.
ಕಾಶಿ ವಿಶ್ವನಾಥ ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ವಿಸ್ತರಿಸಲು ಮತ್ತು ಸುಂದರಗೊಳಿಸುವ ಉದ್ದೇಶದಿಂದ 5 ಲಕ್ಷ ಚದರ ಅಡಿ ವಿಸ್ತೀರ್ಣದ ಪ್ರದೇಶದಲ್ಲಿ ಈ ಕಾಮಗಾರಿ ನಡೆಯುತ್ತಿದೆ.