ನವದೆಹಲಿ:ಐಪಿಎಲ್‌ನಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ರಿಕೆಟಿಗ ನಿತೀಶ್ ರಾಣಾ ಅವರ ಪತ್ನಿ ಸಾಚಿ ಮಾರ್ವಾ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಇಬ್ಬರು ಅಪರಿಚಿತ ಯುವಕರು ಹಿಂಬಾಲಿಸಿಕೊಂಡು ಬಂದಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಈ ಕುರಿತು ಸಾಚಿ ಮಾರ್ವಾ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಮೇ 4 ರ ಗುರುವಾರ ನಡೆದಿದೆ. ಪಟೇಲ್ ನಗರದ ನಿವಾಸಿಗಳಾದ ಚೈತನಯ ಶಿವಂ (18) ಮತ್ತು ವಿವೇಕ್ (18) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನಾಯಕ ನಿತೀಶ್ ರಾಣಾ ಅವರ ಪತ್ನಿ, ಅಪರಿಚಿತರು ಹಿಂಬಾಲಿಸಿದ್ದಲ್ಲದೆ ತೊಂದರೆ ಉಂಟು ಮಾಡಿದಕ್ಕಾಗಿ ಶುಕ್ರವಾರ ಇ-ಮೇಲ್ ಮೂಲಕ ಕೀರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ ಘನಶ್ಯಾಮ್ ಬನ್ಸಾಲ್ ತಿಳಿಸಿದರು.
ಸಾಚಿ ಮಾರ್ವಾ ಗುರುವಾರ ರಾತ್ರಿ 8.30 ರ ಸುಮಾರಿಗೆ ಛತ್ತರ್‌ಪುರದಿಂದ ತನ್ನ ಕಾರಿನಲ್ಲಿ ಮಾಡೆಲ್ ಟೌನ್‌ನಲ್ಲಿರುವ ಮನೆಗೆ ಹಿಂದಿರುಗುತ್ತಿದ್ದರು. ಟ್ರಾಫಿಕ್ ಸಿಗ್ನಲ್ ಬಳಿ ಕಾಯುತ್ತಿದ್ದಾಗ, ಬೈಕ್ನಲ್ಲಿ ಬಂದ ಇಬ್ಬರು ಯುವಕರು ಇವರ ಕಾರಿಗೆ ಬೈಕ್ ಅಡ್ಡಗಟ್ಟಿದ್ದಲ್ಲದೆ, ಕಾರಿಗೆ ತಮ್ಮ ಕೈಗಳಿಂದ ಬಡಿಯುವ ಮೂಲಕ ಆತಂಕ ಉಂಟು ಮಾಡಿದ್ದರು ಎಂದು ಡಿಸಿಪಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಸಾಚಿ ಮಾರ್ವಾ ತನ್ನ ಮೊಬೈಲ್‌ನಲ್ಲಿ ಆರೋಪಿಗಳ ಫೋಟೋವನ್ನು ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು.