ನವದೆಹಲಿ:ಕೇಂದ್ರ ಸರ್ಕಾರ ಮತ್ತು ಕೊಲಿಜಿಯಂ ತಿಕ್ಕಾಟದ ಮಧ್ಯೆ ಸುಪ್ರೀಂಕೋರ್ಟ್ಗೆ ಇಬ್ಬರು ನ್ಯಾಯಾಧೀಶರನ್ನು ನೇಮಕ ಮಾಡಲಾಗಿದೆ. ಅಲಹಾಬಾದ್ ಮತ್ತು ಗುಜರಾತ್ನ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ಶುಕ್ರವಾರ ಸುಪ್ರೀಂ ಕೋಟ್ಗೆ ಬಡ್ತಿ ನೀಡಲಾಗಿದೆ. ಈ ಮೂಲಕ 32 ಇದ್ದ ಸುಪ್ರೀಂ ನ್ಯಾಯಾಧೀಶರ ಸಂಖ್ಯೆ 34 ಕ್ಕೆ ಏರಿಕೆಯಾಗಿದೆ.
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದು, ಭಾರತದ ಸಂವಿಧಾನದ ಪ್ರಕಾರ ರಾಷ್ಟ್ರಪತಿಗಳು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಿದ್ದಾರೆ. ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಾಜೇಶ್ ಬಿಂದಾಲ್, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅರವಿಂದ್ ಕುಮಾರ್ ಅವರನ್ನು ನೇಮಿಸಿ ಆದೇಶಿಸಲಾಗಿದೆ.
ಓದಿ:ಪ್ರಬಲ ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ : 21 ಸಾವಿರಕ್ಕೂ ಅಧಿಕ ಮಂದಿ ಬಲಿ.. ಆಹಾರಕ್ಕಾಗಿ ಬದುಕುಳಿದವರ ಪರದಾಟ
ಇದಕ್ಕೂ ಮೊದಲು ನ್ಯಾಯಾಧೀಶರನ್ನು ನೇಮಿಸುವ ಕೊಲಿಜಿಯಂ ಐದು ಹೈಕೋರ್ಟ್ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿತ್ತು. ಅದರಲ್ಲಿ ಗುಜರಾತ್, ಅಲಹಾಬಾದ್ ಹೈಕೋರ್ಟ್ಗೆ ಕ್ರಮವಾಗಿ ನ್ಯಾ.ಪ್ರಿತಿಂಕರ್ ದಿವಾಕರ್, ನ್ಯಾ.ಸೋನಿಯಾ ಜಿ ಗೋಕಾನಿ ಅವರನ್ನು ಮುಖ್ಯ ನ್ಯಾಯಮೂರ್ತಿಗಳನ್ನಾಗಿ ಹೆಸರಿಸಿದೆ.
ಐದು ಹೈಕೋರ್ಟ್ಗಳಿಗೆ ಜಡ್ಜ್ಗಳ ನೇಮಕ:ಇದಲ್ಲದೇ, ಕೋಲ್ಕತ್ತಾ ಹೈಕೋರ್ಟ್ಗೆ ನ್ಯಾ.ಟಿ ಎಸ್ ಶಿವಜ್ಞಾನಂ, ಛತ್ತೀಸ್‌ಗಢ ಹೈಕೋರ್ಟ್ಗೆ ನ್ಯಾಯಮೂರ್ತಿ ರಮೇಶ್ ಸಿನ್ಹಾ, ಮಣಿಪುರ ಹೈಕೋರ್ಟ್ಗೆ ನ್ಯಾಯಮೂರ್ತಿ ಧೀರಜ್ ಸಿಂಗ್ ಠಾಕೂರ್ ಅವರ ಹೆಸರನ್ನು ಸೂಚಿಸಿದೆ. ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್, ಅರವಿಂದ್ ಕುಮಾರ್ ಅವರಿಗೆ ಬಡ್ತಿ ನೀಡಿದ ಬಳಿಕ ಎರಡೂ ಸ್ಥಾನಗಳು ಖಾಲಿ ಇವೆ ಎಂದು ಕೊಲಿಜಿಯಂ ತಿಳಿಸಿತ್ತು.
5 ಕೋಟಿಯತ್ತ ಬಾಕಿ ಪ್ರಕರಣಗಳು:ಸ್ಥಳೀಯ ನ್ಯಾಯಾಲಯದಿಂದ ಹಿಡಿದು ಸುಪ್ರೀಂಕೋರ್ಟ್ವರೆಗೆ ಬಾಕಿ ಉಳಿದಿರುವ ಪ್ರಕರಣಗಳ ಸಂಖ್ಯೆ 5 ಕೋಟಿಯತ್ತ ಸಾಗುತ್ತಿದೆ. ಪ್ರಸ್ತುತ ದೇಶಾದ್ಯಂತ ನ್ಯಾಯಾಲಯಗಳಲ್ಲಿ 4.92 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ. 2022 ರ ಡಿಸೆಂಬರ್ 31 ರವರೆಗೆ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ 4.32 ಕೋಟಿ ಕೇಸ್ಗಳು ಬಾಕಿ ಉಳಿದಿವೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ರಾಜ್ಯಸಭೆಗೆ ತಿಳಿಸಿದರು.
ಕಲಾಪದಲ್ಲಿ ಪ್ರತಿಪಕ್ಷಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಲ್ಲಿ 2023 ರ ಫೆ.1 ಪ್ರಕಾರ ಸುಪ್ರೀಂಕೋರ್ಟ್ನಲ್ಲಿ ಒಟ್ಟು 69,511 ಕೇಸ್ಗಳು ಬಾಕಿ ಇವೆ. ದೇಶದ 25 ಹೈಕೋರ್ಟ್ಗಳಲ್ಲಿ ಒಟ್ಟು 59 ಲಕ್ಷ ಕೇಸ್ಗಳು ಬಾಕಿ ಇವೆ. ಅದರಲ್ಲಿ ಅಲಹಾಬಾದ್ ಹೈಕೋರ್ಟ್ವೊಂದರಲ್ಲೇ 10.30 ಲಕ್ಷ ಕೇಸ್ಗಳು ಬಾಕಿ ಉಳಿದುಕೊಂಡಿದ್ದು, ದೇಶದಲ್ಲೇ ಅತಿಹೆಚ್ಚು ಕೇಸ್ ಬಾಕಿ ಉಳಿಸಿಕೊಂಡ ಹೈಕೋರ್ಟ್ ಆಗಿದೆ. ಜಿಲ್ಲಾ ಮತ್ತು ಅಧೀನ ನ್ಯಾಯಾಲಯ, ಸುಪ್ರೀಂಕೋರ್ಟ್ ಸೇರಿ 4.92 ಕೋಟಿ ಪ್ರಕರಣಗಳು ದೇಶದಲ್ಲಿ ಬಾಕಿ ಉಳಿದಿವೆ ಎಂದು ಕಾನೂನು ಸಚಿವರ ತಿಳಿಸಿದರು.
ಓದಿ:ಆದಾಯ ಮೀರಿ ಅಧಿಕ ಆಸ್ತಿ ಗಳಿಕೆ ಆರೋಪ.. ಬೆಳ್ಳಂಬೆಳಗ್ಗೆ ಅರಣ್ಯಾಧಿಕಾರಿಗೆ ಲೋಕಾಯುಕ್ತ ಶಾಕ್