ಜಬಲ್ಪುರ (ಮಧ್ಯಪ್ರದೇಶ):ಒಡಿಶಾದ ಬಾಲಸೋರ್ನಲ್ಲಿ ನಡೆದ ರೈಲು ದುರಂತದ ಬೆನ್ನಲ್ಲೇ ಇದೀಗ ಮತ್ತೊಂದು ರೈಲು ಹಳಿ ತಪ್ಪಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಭಿಟೋನಿ ರೈಲು ನಿಲ್ದಾಣದ ಬಳಿ ಮಂಗಳವಾರ ತಡರಾತ್ರಿ ಎಲ್‌ಪಿಜಿ ಗ್ಯಾಸ್ ತುಂಬಿದ್ದ ಗೂಡ್ಸ್ ರೈಲಿನ ಎರಡು ಬೋಗಿಗಳು ಹಳಿ ತಪ್ಪಿದ್ದು, ದೊಡ್ಡ ಮಟ್ಟದ ದುರಂತ ಸಂಭವಿಸಿಲ್ಲ.
ಗೂಡ್ಸ್ ರೈಲು ಮುಖ್ಯ ಗೇಟ್ ಬಳಿ ತಲುಪಿದ ಬಳಿಕ ಎರಡು ಬೋಗಿಗಳು ಹಳಿತಪ್ಪಿವೆ. ಘಟನೆಯ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ರೈಲ್ವೆ ಅಧಿಕಾರಿಗಳು, ಸಿಬ್ಬಂದಿ, ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದೆ.
ಇದನ್ನೂ ಓದಿ :ಬಾಲಸೋರ್ ರೈಲು ದುರಂತ ಸ್ಥಳದ ಇಂದಿನ ವೈಮಾನಿಕ ದೃಶ್ಯ
ಶಹಪುರ ಭಿಟೋನಿ ರೈಲು ನಿಲ್ದಾಣದ ಪಕ್ಕದಲ್ಲಿ ಭಾರತ್ ಪೆಟ್ರೋಲಿಯಂ ಡಿಪೋ ನಿಲ್ದಾಣವಿದ್ದು, ಇದರಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಸಂಗ್ರಹಣೆ ಮಾಡಲಾಗುತ್ತದೆ. ಘಟನೆಯ ಬಳಿಕ ಪ್ರದೇಶದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸದ್ಯಕ್ಕೆ ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಇನ್ನು ಕಳದೆ ಐದು ದಿನಗಳ ಹಿಂದೆ ಅಂದ್ರೆ ಜೂನ್ 2 ರಂದು ಬಾಲಸೋರ್‌ನ ಬಹನಾಗಾ ರೈಲು ನಿಲ್ದಾಣದ ಬಳಿ ಭೀಕರ ರೈಲು ದುರಂತ ಸಂಭವಿಸಿತ್ತು. ಶಾಲಿಮಾರ್ - ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಪಕ್ಕದಲ್ಲಿ ನಿಂತಿದ್ದ ಸರಕು ಸಾಗಾಣಿಕ ರೈಲಿಗೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಹಳಿತಪ್ಪಿದ ಬೋಗಿಗಳು ಪಕ್ಕದ ಟ್ರಾಕ್ಗೆ ಬಿದ್ದಿದ್ದವು. ಈ ವೇಳೆ ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಹೌರಾ ಎಕ್ಸ್‌ಪ್ರೆಸ್ ಸಹ ಹಳಿ ತಪ್ಪಿ, ಸುಮಾರು 275 ಪ್ರಯಾಣಿಕರು ಮೃತಪಟ್ಟಿದ್ದರು.
1100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಸಂಬಂಧ ರೈಲ್ವೆ ಕಾಯ್ದೆ 1989 ಮತ್ತು ಭಾರತೀಯ ದಂಡ ಸಂಹಿತೆಯ ಅನೇಕ ಸೆಕ್ಷನ್‌ಗಳ ಅಡಿ ಒಡಿಶಾ ಸರ್ಕಾರಿ ರೈಲ್ವೆ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಎಫ್‌ಐಆರ್ ವರದಿಯ ಪ್ರಕಾರ, ರೈಲ್ವೆ ಕಾಯ್ದೆಯ ಸೆಕ್ಷನ್ 154, 175 ಮತ್ತು 153 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 337, 338, 304 ಎ ಮತ್ತು 34 ರ ಅಡಿ ಅಪಘಾತಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕರಣಗಳನ್ನ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಇದನ್ನೂ ಓದಿ :ಒಡಿಶಾ ರೈಲು ದುರಂತ.. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲು, ತನಿಖೆಗೆ ಮನವಿ!
ಹಳಿ ತಪ್ಪಿದ ಗೂಡ್ಸ್ ರೈಲು:ಮತ್ತೊಂದೆಡೆ, ಜೂನ್ 5ರಂದು ಒಡಿಶಾದ ಬಾರ್ಗಢ ಜಿಲ್ಲೆಯ ಮೆಂಧಪಾಲಿ ಬಳಿ ಗೂಡ್ಸ್ ರೈಲಿನ ಐದು ಬೋಗಿಗಳು ಹಳಿತಪ್ಪಿದ ಘಟನೆ ನಡೆದಿತ್ತು. ಈ ವೇಳೆ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಸುಣ್ಣದಕಲ್ಲು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಹಲವಾರು ವ್ಯಾಗನ್‌ಗಳು ಬಾರ್ಗಢನಲ್ಲಿ ಹಳಿ ತಪ್ಪಿದ್ದು, ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದರು.
ಇದನ್ನೂ ಓದಿ :ಹಳಿ ತಪ್ಪಿದ ಗೂಡ್ಸ್ ರೈಲಿನ ಐದು ಬೋಗಿಗಳು... ಒಡಿಶಾದಲ್ಲಿ ಮತ್ತೊಂದು ಘಟನೆ