ಕೊಚ್ಚಿ (ಕೇರಳ) :ಗರ್ಭದಾರಣೆ ಮತ್ತು ಮಗುವಿಗೆ ಜನ್ಮ ನೀಡುವ ಮೂಲಕ ದೇಶದ ಗಮನ ಸೆಳೆದಿರುವ ಕೇರಳ ಮೂಲದ ಕೋಯಿಕ್ಕೋಡ್‌ನ ಲಿಂಗಪರಿವರ್ತಿತ (ತೃತೀಯಲಿಂಗಿ) ದಂಪತಿ ಜಹಾದ್ ಮತ್ತು ಜಿಯಾ ಇದೀಗ ಮತ್ತೆ ಸುದ್ದಿಯ ಮುನ್ನೆಲೆಗೆ ಬಂದಿದ್ದಾರೆ. ಇತ್ತೀಚೆಗಷ್ಟೇ ದಂಪತಿಯು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಜನನ ಪ್ರಮಾಣಪತ್ರದಲ್ಲಿ ತಂದೆ - ತಾಯಿ ಬದಲಾಗಿ 'ಪೋಷಕ' ಎಂದು ಬದಲಾಯಿಸಲು ಕೋರಿ ಕೇರಳದ ಹೈಕೋರ್ಟ್ ಮೆಟ್ಟಿಲು ಏರಿದ್ದಾರೆ.
ಜಹಾದ್ (ಹುಟ್ಟಿದಾಗ ಹೆಣ್ಣು, ಲಿಂಗ ಪರಿವರ್ತನೆ ಬಳಿಕ ಪುರುಷ) ಮತ್ತು ಜಿಯಾ (ಹುಟ್ಟಿದಾಗ ಪುರುಷ, ಲಿಂಗ ಪರಿವರ್ತನೆ ಬಳಿಕ ಮಹಿಳೆ) ಫೆಬ್ರವರಿಯಲ್ಲಿ ಮಗುವಿಗೆ ಜನ್ಮ ನೀಡಿ ದೇಶದ ಗಮನ ಸೆಳೆದಿದ್ದರು. ಸದ್ಯ ಕೋಯಿಕ್ಕೋಡ್ ಕಾರ್ಪೊರೇಷನ್ನಲ್ಲಿ ಮಗುವಿನ ಜನನ ಪ್ರಮಾಣಪತ್ರದಲ್ಲಿ ತಾಯಿಯ ಹೆಸರು ಜಹಾದ್ (ಲಿಂಗಪರಿವರ್ತಿತ) ಮತ್ತು ತಂದೆಯ ಹೆಸರು ಜಿಯಾ (ಲಿಂಗಪರಿವರ್ತಿತ) ಎಂದು ದಾಖಲಾಗಿದೆ. ಆದರೆ, ತಂದೆ ಮತ್ತು ತಾಯಿ ಅನ್ನೋದನ್ನು ತೆಗೆದು ಹಾಕುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಭವಿಷ್ಯದ ಹಿತದೃಷ್ಟಿಯಿಂದ ಹಾಗೂ ಕೆಲವು ಕಾರಣಾಂತರಗಳಿಂದ ಜಹಾದ್ ಮತ್ತು ಜಿಯಾ ಅವರು ತಮ್ಮ ಮಗುವಿನ ಜನನ ಪ್ರಮಾಣಪತ್ರದಲ್ಲಿನ ವಿವರಗಳನ್ನು ಬದಲಾಯಿಸಲು ಇತ್ತೀಚೆಗೆ ಕೋಯಿಕ್ಕೋಡ್ ಕಾರ್ಪೊರೇಷನ್ಗೆ ಭೇಟಿ ನೀಡಿದ್ದರು. ಭೇಟಿ ವೇಳೆ ಈಗಾಗಲೇ ನೋಂದಣಿಯಾಗಿರುವ ನಮ್ಮ ಮಗುವಿನ ಜನನ ಪ್ರಮಾಣಪತ್ರದಲ್ಲಿನ ತಂದೆ - ತಾಯಿ ಎಂಬ ಪದ ತೆಗೆದು ಹಾಕಿ ಅದೇ ಸ್ಥಳದಲ್ಲಿ 'ಪೋಷಕರು' ಎಂಬ ಪದ ಉಲ್ಲೇಖ ಮಾಡುವಂತೆ ಕೇಳಿಕೊಂಡಿದ್ದರು. ಆದರೆ, ಅಧಿಕಾರಿಗಳು ದಂಪತಿ ಮನವಿಯನ್ನು ತಿರಸ್ಕರಿಸಿದ್ದು ಇದಕ್ಕೆ ಕೆಲವು ಕಾನೂನಿನ ಅಡಚಣೆ ಉಂಟಾಗಲಿದ್ದು ನೀವುಗಳು ಹೈಕೋರ್ಟ್‌ಗೆ ಹೋಗಬೇಕಾಗುತ್ತದೆ ಎಂದು ತಿಳಿ ಹೇಳಿದ್ದರು.
ಅದರಂತೆ ಅವರು ಕೋರ್ಟ್ ಮೆಟ್ಟಿಲೇರಿದ್ದಾರೆ. ಲಿಂಗಪರಿವರ್ತಿತ ದಂಪತಿಯಿಂದ ಹುಟ್ಟಿದ ಮಗು ಭವಿಷ್ಯದಲ್ಲಿ ಮುಜುಗರಕ್ಕೊಳಗಾಗಬಹುದು. ಮಗುವಿನಲ್ಲಿ ಕೆಟ್ಟ ಭಾವನೆಗಳು ಮೂಡಬಹುದು. ಅಲ್ಲದೇ ತಮ್ಮ ಲಿಂಗಪರಿವರ್ತನೆ ಆಗಿದ್ದರಿಂದ ಸಮಾಜ ದೃಷ್ಟಿಯಲ್ಲಿ ತಾವುಗಳು ಬೇರೆಯೇ. ತಾವು ಗಂಡು ಎಂದು ಗುರುತಿಸಿಕೊಂಡು ಸಮಾಜದಲ್ಲಿ ಪುರುಷ ಸದಸ್ಯನಾಗಿ, ಹಾಗೆಯೇ ಹೆಣ್ಣು ಎಂದು ಗುರುತಿಸಿಕೊಂಡು ಸಮಾಜದಲ್ಲಿ ಮಹಿಳೆಯಾಗಿ ಬದುಕುತ್ತಿದ್ದೇವೆ. ಇದು ಮಗುವಿನ ಭವಿಷ್ಯದಲ್ಲಿ ಬೇರೊಂದು ಪರಿಣಾಮ ಬೀರುವ ಸಾಧ್ಯತೆ ಇದೆ. ಆದ ಕಾರಣ ತಮ್ಮ ಮಗುವಿನ ಜನನ ಪ್ರಮಾಣಪತ್ರದಲ್ಲಿರುವ ತಂದೆ ಮತ್ತು ತಾಯಿಯ ಹೆಸರನ್ನು ತೆಗೆದುಹಾಕುವಂತೆ ಕೋಯಿಕ್ಕೋಡ್ ಕಾರ್ಪೊರೇಷನ್ ಅಧಿಕಾರಿಗಳ ಅಣತಿಯಂತೆ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.