ಕರ್ನಾಟಕ

karnataka

ETV Bharat / bharat

1989ರ ರುಬಿಯಾ ಸಯೀದ್​ ಕಿಡ್ನಾಪ್​ ಪ್ರಕರಣ:​ ಮಲಿಕ್ ಸೇರಿ ನಾಲ್ವರನ್ನು ಗುರುತಿಸಿದ ಮುಫ್ತಿ ಸಹೋದರಿ

ಸಿಬಿಐ ತನಿಖೆಯಲ್ಲಿ ಲಭ್ಯವಾದ ಛಾಯಾಚಿತ್ರಗಳ ಆಧಾರದ ಮೇಲೆ ಯಾಸೀನ್​ ಮಲಿಕ್ ಸೇರಿ ನಾಲ್ವರನ್ನು ರುಬಿಯಾ ಸಯೀದ್​ ಗುರುತಿಸಿದ್ದಾರೆ

By

Published : Jul 15, 2022, 7:06 PM IST

Updated : Jul 15, 2022, 7:49 PM IST

1989-kidnapping-case-rubaiya-sayeed-identifies-all-her-abductors-including-yasin-malik
1989ರ ರುಬಿಯಾ ಸಯೀದ್​ ಕಿಡ್ನಾಪ್​ ಪ್ರಕರಣ:​ ಮಲಿಕ್ ಸೇರಿ ನಾಲ್ವರನ್ನು ಗುರುತಿಸಿದ ಮುಫ್ತಿ ಸಹೋದರಿ

ಶ್ರೀನಗರ (ಜಮ್ಮು-ಕಾಶ್ಮೀರ): 1989ರ ರುಬಿಯಾ ಸಯೀದ್​ ಕಿಡ್ನಾಪ್​ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಪಹರಣಕ್ಕೊಳಗಾಗಿದ್ದ ರುಬಿಯಾ ನಾಲ್ವರು ಆರೋಪಿಗಳನ್ನು ಗುರುತಿಸಿದ್ದಾರೆ. ಇದರಲ್ಲಿ ಜಮ್ಮು- ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಯಾಸೀನ್​ ಮಲಿಕ್​ ಕೂಡ ಸೇರಿದ್ದಾನೆ.

ಜಮ್ಮು- ಕಾಶ್ಮೀರದ ಮಾಜಿ ಸಿಎಂ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಸಹೋದರಿಯಾಗಿರುವ ರುಬಿಯಾ ಸಯೀದ್​ 1989ರಲ್ಲಿ ಅಪಹರಣಕ್ಕೊಳಗಾಗಿದ್ದರು. ಈ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಸುತ್ತಿದ್ದು, ಇಂದು ನ್ಯಾಯಾಲಯಕ್ಕೆ ರುಬಿಯಾ ಸಯೀದ್​ ಅವರನ್ನು ಹಾಜರು ಪಡಿಸಲಾಗಿತ್ತು.

ಈ ವೇಳೆ, ಸಿಬಿಐ ತನಿಖೆಯಲ್ಲಿ ಲಭ್ಯವಾದ ಛಾಯಾಚಿತ್ರಗಳ ಆಧಾರದ ಮೇಲೆ ಯಾಸೀನ್​ ಮಲಿಕ್ ಸೇರಿ ನಾಲ್ವರನ್ನು ರುಬಿಯಾ ಗುರುತಿಸಿದ್ದಾರೆ ಎಂದು ಸಿಬಿಐ ಪರ ವಕೀಲರು ತಿಳಿಸಿದ್ದಾರೆ.

1989ರ ರುಬಿಯಾ ಸಯೀದ್​ ಕಿಡ್ನಾಪ್​ ಪ್ರಕರಣ:​ ಮಲಿಕ್ ಸೇರಿ ನಾಲ್ವರನ್ನು ಗುರುತಿಸಿದ ಮುಫ್ತಿ ಸಹೋದರಿ

ಏನಿದು ಪ್ರಕರಣ?: ಜಮ್ಮು-ಕಾಶ್ಮೀರದ ಹಿರಿಯ ರಾಜಕಾರಣಿ ದಿ.ಮುಫ್ತಿ ಮೊಹಮ್ಮದ್​​ ಸಯೀದ್​​ ಅವರ ತೃತೀಯ ಪುತ್ರಿ ಈ ರುಬಿಯಾ ಸಯೀದ್​. 1989ರಲ್ಲಿ ಕೇಂದ್ರದಲ್ಲಿ ವಿ.ಪಿ.ಸಿಂಗ್​ ನೇತೃತ್ವದ ಜನತಾ ದಳ ಸರ್ಕಾರವಿತ್ತು. ಈ ಸರ್ಕಾರದಲ್ಲಿ ಮುಫ್ತಿ ಮೊಹಮ್ಮದ್​​ ಸಯೀದ್​​ ಗೃಹ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಲಾಲ್ ಡೆಡ್ ಸ್ಮಾರಕ ಮಹಿಳಾ ಆಸ್ಪತ್ರೆಯಲ್ಲಿ ಮೆಡಿಕಲ್ ಇಂಟರ್ನ್ ಆಗಿದ್ದ 23 ವರ್ಷದ ರುಬಿಯಾ ಸಯೀದ್ ಅವರನ್ನು 1989ರ ಡಿಸೆಂಬರ್​ 8ರಂದು ಮಧ್ಯಾಹ್ನ 3.45ರ ಸುಮಾರಿಗೆ ಅಪಹರಣ ಮಾಡಲಾಗಿತ್ತು.

ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಗುಂಪಿನ ಜಮ್ಮು ಕಾಶ್ಮೀರ ಲಿಬರೇಶನ್ ಫ್ರಂಟ್​ನ ಸದಸ್ಯರು ರುಬಿಯಾ ಸಯೀದ್​ರನ್ನು ಕಿಡ್ನಾಪ್​ ಮಾಡಿದ್ದರು. ಅಲ್ಲದೇ, ರುಬಿಯಾ ಸಯೀದ್ ಬಿಡಬೇಕಾದರೆ ತಮ್ಮ ಗುಂಪಿನ ಐವರು ಉಗ್ರರನ್ನು ಬಿಡುಗಡೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಆಗ ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಆಗಿದ್ದ ಫಾರೂಕ್ ಅಬ್ದುಲ್ಲಾ ಕೇಂದ್ರ ಸರ್ಕಾರದ ಅನುಮತಿ ಮೇರೆಗೆ ಜೈಲಿನಲ್ಲಿದ್ದ ಉಗ್ರರ ಬಿಡುಗಡೆಗೆ ಒಪ್ಪಿದ್ದರು.

ಅಂತೆಯೇ, ಡಿಸೆಂಬರ್​​ 13ರಂದು ರುಬಿಯಾ ಸಯೀದ್​​ರನ್ನು ಉಗ್ರರು ಬಿಡುಗಡೆ ಮಾಡಿದ್ದರು. ಇದಾದ ಎರಡು ಗಂಟೆಗಳ ಬಳಿಕ ಐವರು ಉಗ್ರರನ್ನೂ ಸರ್ಕಾರ ಬಿಡುಗಡೆ ಮಾಡಿತ್ತು. ಸದ್ಯ ಪ್ರಕರಣದಲ್ಲಿ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಯಾಸೀನ್​ ಮಲಿಕ್ ವಿಚಾರಣೆ ಎದುರಿಸುತ್ತಿದ್ಧಾರೆ.

ಇದನ್ನೂ ಓದಿ:ಕುಡಿಯಲು ನೀರು ಕೇಳಿದ ಇಬ್ಬರು ಯುವಕರಿಗೆ ಮೂತ್ರ ಕುಡಿಸಿ, ವಿಡಿಯೋ ಮಾಡಿದ ಕಿರಾತಕರು!

Last Updated : Jul 15, 2022, 7:49 PM IST

ABOUT THE AUTHOR

...view details