ನವದೆಹಲಿ: ಕೊರೊನಾ ಸಾಂಕ್ರಾಮಿಕ ಭಾರತದಲ್ಲಿ ಸುಮಾರು 19 ಲಕ್ಷ ಮಕ್ಕಳನ್ನು ಪೋಷಕರು ಅಥವಾ ಆರೈಕೆದಾರರಿಲ್ಲದಂತೆ ಮಾಡಿದೆ. ಇದು ಆಗ್ನೇಯ ಏಷ್ಯಾ ಪ್ರದೇಶದಲ್ಲಿ ಅತಿ ಹೆಚ್ಚು ಎಂದು ದಿ ಲ್ಯಾನ್ಸೆಟ್ ಚೈಲ್ಡ್ ಮತ್ತು ಅಡೋಲೆಸೆಂಟ್ ಹೆಲ್ತ್‌ನಲ್ಲಿ ಪ್ರಕಟವಾದ ಹೊಸ ಅಂಕಿ- ಅಂಶಗಳಿಂದ ತಿಳಿದುಬಂದಿದೆ.
ಆದರೆ, ಭಾರತ ಸರ್ಕಾರದ ಅಂಕಿ- ಅಂಶಗಳು ಈ ಅಂಕಿ ಅಂಶಗಳನ್ನು ನಿರಾಕರಿಸುತ್ತವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಬಾಲ್ ಸ್ವರಾಜ್ - ಕೋವಿಡ್ ಕೇರ್ ಪೋರ್ಟಲ್ ಪ್ರಕಾರ, ಈ ಸಂಖ್ಯೆ 1.5 ಲಕ್ಷ ಇದೆ. ಜಾಗತಿಕವಾಗಿ, ಈ ಸಂಖ್ಯೆ 5.2 ಮಿಲಿಯನ್ಗಿಂತ ಹೆಚ್ಚಿದೆ. ತಲಾವಾರು ಅಂದಾಜು ಅನಾಥ ಪ್ರಕರಣಗಳ ಲೆಕ್ಕಾಚಾರಗಳಲ್ಲಿ ಪೆರು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಈ ಪ್ರಮಾಣ ಅತಿ ಹೆಚ್ಚಾಗಿ ಕಂಡುಬಂದಿದೆ. ಪ್ರತಿ 1,000 ಮಕ್ಕಳಲ್ಲಿ ಕ್ರಮವಾಗಿ 7 ರಿಂದ 8 ಮಕ್ಕಳು ಕೊರೊನಾದಿಂದ ಪಾಲಕರನ್ನ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದ ಪರಿಣಾಮವಾಗಿ ಸಾವಿಗೀಡಾದ ಪ್ರತಿ ವ್ಯಕ್ತಿಗೆ, ಕನಿಷ್ಠ ಒಂದು ಮಗು ಅನಾಥವಾಗಿದೆ ಅಥವಾ ಆರೈಕೆದಾರನನ್ನು ಕಳೆದುಕೊಳ್ಳುತ್ತದೆ ಎಂದು ನಾವು ಅಂದಾಜು ಮಾಡಿದ್ದೇವೆ ಎಂದು ಅಮೆರಿಕ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಯ ಪ್ರಮುಖ ಲೇಖಕ ಡಾ. ಸೂಸನ್ ಹಿಲ್ಲಿಸ್ ಹೇಳಿದ್ದಾರೆ.
14 ಕೋಟಿ ಮಕ್ಕಳು ಅನಾಥ:ಕೋವಿಡ್ ಸಾಂಕ್ರಾಮಿಕದ ಮೊದಲು ಪ್ರಪಂಚದಾದ್ಯಂತ ಅಂದಾಜು 140 ಮಿಲಿಯನ್ ಅನಾಥ ಮಕ್ಕಳಿದ್ದರು. ಇನ್ನು ಕೋವಿಡ್ ತರುವಾಯ ಮಾರ್ಚ್ 2020 ಮತ್ತು ಏಪ್ರಿಲ್ 2021 ರ ನಡುವೆ 1.5 ಮಿಲಿಯನ್ ಮಕ್ಕಳು ಅನಾಥರಾಗಿದ್ದಾರೆ ಎಂದು ತಿಳಿದುಬಂದಿದೆ.