ನವದೆಹಲಿ:ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯು ರಂಗೇರಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಏರ್ಪಡುವ ನಿರೀಕ್ಷೆ ಇದೆ. ಹಾಲಿ ಮತ್ತು ಹೊಸಬರಿಗೆ ಮಣೆ ಹಾಕಿರುವ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯಲು ಶ್ರಮಿಸುತ್ತಿದ್ದಾರೆ. ಕೇಸರಿ ಪಡೆ ಮಣಿಸಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹವಣಿಸುತ್ತಿದೆ.
ಇದೇ ವೇಳೆ, ಮಧ್ಯಪ್ರದೇಶದ 230 ಹಾಲಿ ಶಾಸಕರ ಪೈಕಿ 186 ಮಂದಿ ಕೋಟ್ಯಧಿಪತಿಗಳಾಗಿದ್ದು, ಈ ಪೈಕಿ 107 ಶಾಸಕರು ಆಡಳಿತಾರೂಢ ಬಿಜೆಪಿಯವರಾಗಿದ್ದಾರೆ ಎಂದು ವರದಿಯೊಂದು ಹೇಳಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಮಧ್ಯಪ್ರದೇಶ ಎಲೆಕ್ಷನ್ ವಾಚ್ ನಡೆಸಿರುವ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಇದರ ಜೊತೆಗೆ ಎಲ್ಲ ಹಾಲಿ ಶಾಸಕರ ಮೇಲಿರುವ ಅಪರಾಧ, ಆರ್ಥಿಕ ಸ್ಥಿತಿ ಮತ್ತಿತರ ವಿವರಗಳನ್ನು ವಿಶ್ಲೇಷಿಸಿ ಈ ವರದಿ ತಯಾರಿಸಿದೆ.
ಬಿಜೆಪಿಯಲ್ಲಿ ಕೋಟಿ ಕುಳಗಳು:ವಿಧಾನಸಭೆಯ 230 ಹಾಲಿ ಶಾಸಕರಲ್ಲಿ 186 (ಶೇ 81 ರಷ್ಟು) ಕೋಟ್ಯಧಿಪತಿಗಳು ಇದ್ದಾರೆ ಎಂದು ವರದಿಯಲ್ಲಿದೆ. ಆಡಳಿತಾರೂಢ ಬಿಜೆಪಿಯ ಪಾಳಯದಲ್ಲಿ ಇರುವ 129 ಶಾಸಕರ ಪೈಕಿ 107 ಅಂದರೆ, ಶೇ.83 ರಷ್ಟು, ಕಾಂಗ್ರೆಸ್‌ನ 97 ಶಾಸಕರ ಪೈಕಿ 76 ಮಂದಿ (ಶೇ. 78 ರಷ್ಟು) ಮತ್ತು ಮೂವರು ಸ್ವತಂತ್ರ ಶಾಸಕರರು ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ ಆಸ್ತಿ ಘೋಷಿಸಿದ್ದಾರೆ ಅಫಡವಿಟ್ನಲ್ಲಿ ಘೋಷಿಸಿದ್ದಾರೆ.
ವಿಶೇಷ ಎಂದರೆ, ರಾಜ್ಯದ ಪ್ರತಿ ಹಾಲಿ ಶಾಸಕರ ಆಸ್ತಿಯ ಸರಾಸರಿಯೇ 10.76 ಕೋಟಿ ರೂಪಾಯಿ ಇದೆ. ಅದರಲ್ಲಿ 129 ಬಿಜೆಪಿ ಶಾಸಕರ ಸರಾಸರಿ ಆಸ್ತಿ 9.89 ಕೋಟಿ ರೂಪಾಯಿ. ಇನ್ನು 97 ಕಾಂಗ್ರೆಸ್ ಶಾಸಕರ ಸರಾಸರಿ 11.98 ಕೋಟಿ ರೂಪಾಯಿ ಆದರೆ, ಬಿಎಸ್‌ಪಿಯ ಒಬ್ಬ ಶಾಸಕರದ್ದು 96.95 ಲಕ್ಷ ರೂ. ಆದಾಯ ಹೊಂದಿದ್ದಾರೆ. ಇನ್ನು ಮೂವರು ಸ್ವತಂತ್ರ ಶಾಸಕರು 11.98 ಕೋಟಿ ರೂ. ಸರಾಸರಿ ಆಸ್ತಿ ಹೊಂದಿದ್ದಾರೆ ಎಂದು ವರದಿ ಹೇಳಿದೆ.
ಬಿಜೆಪಿಯಲ್ಲೇ ಅತಿ ಹೆಚ್ಚು- ಅತಿ ಕಡಿಮೆ ಸಂಪತ್ತು:ಬಿಜೆಪಿಯಲ್ಲಿ ಕೋಟಿ ಕುಳಗಳ ಪೈಕಿ ವಿಜಯರಾಘವಗಢದ ಬಿಜೆಪಿ ಶಾಸಕ ಸಂಜಯ್ ಸತ್ಯೇಂದ್ರ ಪಾಠಕ್ ಅವರು 226.17 ಕೋಟಿ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದು, ರಾಜ್ಯದಲ್ಲೇ ಅತಿ ಸಿರಿವಂತ ಶಾಸಕರಾಗಿದ್ದಾರೆ. ಮತ್ತೊಂದು ಕಡೆ ರತ್ಲಂ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಚೆತನ್ಯ ಕಶ್ಯಪ್ ಅವರು 204.6 ಕೋಟಿ ಆಸ್ತಿ ಹೊಂದಿ ಎರಡನೇ ಸ್ಥಾನದಲ್ಲಿದ್ದಾರೆ. ಜೊತೆಗೆ ಖುರಾಯ್‌ನ ಬಿಜೆಪಿ ಶಾಸಕ ಭೂಪೇಂದ್ರ ಸಿಂಗ್ ಅವರು ಕೇವಲ 97.63 ಲಕ್ಷ ರೂಪಾಯಿ ಆಸ್ತಿ ಹೊಂದಿದ್ದರೆ, ಪಂಧಾನ (ಎಸ್‌ಟಿ) ವಿಧಾನಸಭಾ ಕ್ಷೇತ್ರದ ಬಿಜೆಪಿ ಹಾಲಿ ಶಾಸಕ ರಾಮ್ ದಂಗೋರ್ ಅವರು ಜಸ್ಟ್ 50,749 ರೂಪಾಯಿ ಮೌಲ್ಯದ ಆಸ್ತಿ ಹೊಂದುವ ಮೂಲಕ ಅತಿ ಕಡಿಮೆ ಆಸ್ತಿ ಹೊಂದಿರುವ ಶಾಸಕರಾಗಿದ್ದಾರೆ.
ಕಾಂಗ್ರೆಸ್ ಶಾಸಕರೆನೂ ಆಸ್ತಿ ಗಳಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಕೈ ಕೋಟಿಪತಿಗಳಲ್ಲಿ ಬೆತುಲ್ ಕ್ಷೇತ್ರದ ಶಾಸಕ ನಿಲಯ್ ವಿನೋದ್ ದಾಗಾ ಅವರು 127.6 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದಾರೆ. ಇದರ ಜೊತೆಗೆ ಉಳಿದ 38 ಶಾಸಕರು ಕನಿಷ್ಠ 1 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದಾಗಿ ಘೋಷಿಸಿದ್ದಾರೆ ಎಂದು ವರದಿಯು ಉಲ್ಲೇಖಿಸಲಾಗಿದೆ.
ಶೈಕ್ಷಣಿಕ ಅರ್ಹತೆ:62 (ಶೇಕಡಾ 33 ) ಶಾಸಕರು ತಮ್ಮ ಶೈಕ್ಷಣಿಕ ಅರ್ಹತೆಯನ್ನು 5 ರಿಂದ 12 ನೇ ತರಗತಿ ಎಂದು ಘೋಷಿಸಿದ್ದರೆ, 158 (ಶೇ.64) ಶಾಸಕರು ಪದವೀಧರ ಅಥವಾ ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆಂದು ಘೋಷಿಸಿದ್ದಾರೆ. ಇದರೊಂದಿಗೆ ನಾಲ್ವರು ಶಾಸಕರು ಡಿಪ್ಲೊಮಾ ಪಡೆದಿದ್ದರೆ, ಐವರು ಶಾಸಕರು ತಾವು ಕೇವಲ ಸಾಕ್ಷರರು ಎಂದು ಘೋಷಿಸಿಕೊಂಡಿದ್ದಾರೆ. ಒಬ್ಬ ಶಾಸಕ ಅನಕ್ಷರಸ್ಥರಾಗಿದ್ದಾರೆ.
96 (ಶೇ. 42) ಶಾಸಕರು ತಮ್ಮ ವಯಸ್ಸು 25 ರಿಂದ 50 ವರ್ಷ ಎಂದು ತಿಳಿಸಿದ್ದರೆ, 134 (ಶೇ. 58) ಶಾಸಕರು ತಮ್ಮ ವಯಸ್ಸು 51 ರಿಂದ 80 ವರ್ಷ ಎಂದು ಘೋಷಿಸಿದ್ದಾರೆ. 230 ಶಾಸಕರ ಪೈಕಿ 20 (ಶೇ.9) ಶಾಸಕರು ಮಹಿಳೆಯರಾಗಿದ್ದಾರೆ ಎಂದು ವರದಿ ತಿಳಿಸಿದೆ. 230 ಸದಸ್ಯರ ವಿಧಾನಸಭೆಗೆ ನವೆಂಬರ್ 17 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ:ಚಿನ್ನದ ಕನ್ನಡಕ, ಮೊಬೈಲ್ ಕವರ್.. ಈ 'ಬಂಗಾರದ ಮನುಷ್ಯ' ಎಷ್ಟು ಕೆಜಿ ಚಿನ್ನ ಧರಿಸುವವರು ಗೊತ್ತೇ?