ನವದೆಹಲಿ:ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆಯ ಮುಖ್ಯ ಸಮಾರಂಭ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಜಧಾನಿ ದೆಹಲಿಯ ಕೆಂಪು ಕೋಟೆಯಲ್ಲಿ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಿ ಸಾಂಪ್ರದಾಯಿಕ ಭಾಷಣ ಮಾಡಲಿದ್ದಾರೆ. ಇಂದು ಸಂಜೆ ದೇಶವನ್ನುದ್ದೇಶಿಸಿ ರಾಷ್ಟ್ರಪತಿಗಳು ಮಾತನಾಡಲಿದ್ದಾರೆ.
ಇನ್ನು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಎಂದಿನಂತೆ ಇದರೆ ಸ್ವಲ್ಪ ಭಿನ್ನವಾಗಿರಲಿದೆ. ಪ್ರಧಾನಿಯವರ ಚಿಂತನೆಯ 'ಜನ ಭಾಗಿದಾರಿಕೆ' ತತ್ವದಂತೆ ಸುಮಾರು 1,800 'ವಿಶೇಷ ಅತಿಥಿಗಳು' ಕೆಂಪು ಕೋಟೆಯ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಸಾಂಪ್ರದಾಯಿಕ ಉಡುಗೆಯಲ್ಲಿ ಪಾಲ್ಗೊಳ್ಳಲಿರುವ 75 ಜೋಡಿಗಳು: "ಕೆಂಪು ಕೋಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ವಿವಿಧ ವೃತ್ತಿಗಳ ಸುಮಾರು 1,800 ಜನರನ್ನು ತಮ್ಮ ಸಂಗಾತಿಗಳೊಂದಿಗೆ ವಿಶೇಷ ಅತಿಥಿಗಳಾಗಿ ದೇಶಾದ್ಯಂತ ಆಹ್ವಾನಿಸಲಾಗಿದೆ" ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. ಮೋದಿ ಅವರು ಆಗಸ್ಟ್ 15, 2023ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡಲಿದ್ದಾರೆ. ಮಾಹಿತಿಯ ಪ್ರಕಾರ ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶದಿಂದ 75 ಜೋಡಿಗಳು ಅವರ ಸಾಂಪ್ರದಾಯಿಕ ಉಡುಗೆಯಲ್ಲಿ ಕೆಂಪು ಕೋಟೆಯಲ್ಲಿನ ಸಮಾರಂಭದಲ್ಲಿ ಭಾಗಿಯಾಗಲು ಆಹ್ವಾನಿಸಲಾಗಿದೆ.
ವಿಶೇಷ ಅತಿಥಿಗಳು ಯಾರ್ಯಾರು?:
- ಉತ್ತಮ ಗ್ರಾಮಗಳ 400 ಮಂದಿ ಸರಪಂಚರು.
- ರೈತ ಉತ್ಪಾದಕ ಸಂಸ್ಥೆಗಳಲ್ಲಿರುವ 250 ರೈತರು.
- ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 50 ಫಲಾನುಭವಿಗಳು.
- ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 50 ಜನರು.
- ಹೊಸ ಸಂಸತ್ ಕಟ್ಟಡ ಸೇರಿದಂತೆ ಕೇಂದ್ರ ವಿಸ್ಟಾ ಯೋಜನೆಯ 50 ಕಾರ್ಮಿಕರು.
- 50 ಖಾದಿ ಕಾರ್ಮಿಕರು, 50 ಪ್ರಾಥಮಿಕ ಶಾಲಾ ಶಿಕ್ಷಕರು, 50 ದಾದಿಯರು ಮತ್ತು 50 ಮಂದಿ ಮೀನುಗಾರರು.
- ಗಡಿ ರಸ್ತೆಗಳ ನಿರ್ಮಾಣ, ಅಮೃತ್ ಸರೋವರ ಮತ್ತು ಹರ್ ಘರ್ ಜಲ ಯೋಜನೆಯಲ್ಲಿ ತೊಡಗಿರುವ ಕಾರ್ಮಿಕರು.
ಈ ವಿಶೇಷ ಅತಿಥಿಗಳಲ್ಲಿ ಕೆಲವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲು ಮತ್ತು ದೆಹಲಿಯಲ್ಲಿ ತಮ್ಮ ವಾಸ್ತವ್ಯದ ಭಾಗವಾಗಿ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯು 'ಆಜಾದಿ ಕಾ ಅಮೃತ್ ಮಹೋತ್ಸವ' ಆಚರಣೆಗಳನ್ನು ಮುಕ್ತಾಯಗೊಳಿಸಲಿದೆ. ಇದನ್ನು 2021 ಮಾರ್ಚ್ 12 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮದಿಂದ ಪ್ರಧಾನಿ ಪ್ರಾರಂಭಿಸಿದ್ದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ನರೇಂದ್ರ ಮೋದಿಯವರ ಕನಸನ್ನು ನನಸಾಗಿಸಲು ಹೊಸ ಚೈತನ್ಯದೊಂದಿಗೆ ದೇಶವನ್ನು 'ಅಮೃತ್ ಕಾಲ'ಕ್ಕೆ ಕ್ಕೆಕರೆದೊಯ್ಯುತ್ತದೆ ಎನ್ನಲಾಗಿದೆ.
ಸೆಲ್ಫಿ ಪಾಯಿಂಟ್ ಸ್ಥಾಪನೆ: 77ನೇ ಸ್ವಾತಂತ್ರ್ಯ ದಿನಾಚರಣೆಯನ್ನುಆಚರಿಸಲು ಹಲವಾರು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ. ರಾಷ್ಟ್ರೀಯ ಯುದ್ಧ ಸ್ಮಾರಕ, ಇಂಡಿಯಾ ಗೇಟ್, ವಿಜಯ್ ಚೌಕ್, ನವದೆಹಲಿ ರೈಲು ನಿಲ್ದಾಣ, ರಾಜ್ ಘಾಟ್, ಜಾಮಾ ಮಸೀದಿ, ಮೆಟ್ರೋ ನಿಲ್ದಾಣ, ರಾಜೀವ್ ಚೌಕ್ ಮೆಟ್ರೋ ನಿಲ್ದಾಣ, ದೆಹಲಿ ಗೇಟ್ ಮೆಟ್ರೋ ನಿಲ್ದಾಣ, ಈಟಿಒ ಮೆಟ್ರೋ ಗೇಟ್, ನೌಬತ್ ಖಾನಾ ಮತ್ತು ಶೀಶ್ ಗಂಜ್ ಗುರುದ್ವಾರ, ಪ್ರಗತಿ ಮೈದಾನ ಸೇರಿದಂತೆ 12 ಸ್ಥಳಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳು ಮತ್ತು ಉಪಕ್ರಮಗಳಿಗೆ ಮೀಸಲಾದ ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲಾಗಿದೆ.
ಯೋಜನೆಗಳು/ಉಪಕ್ರಮಗಳು:
- ಲಸಿಕೆ ಮತ್ತು ಯೋಗ
- ಉಜ್ವಲ ಯೋಜನೆ
- ಬಾಹ್ಯಾಕಾಶ ಶಕ್ತಿ
- ಡಿಜಿಟಲ್ ಇಂಡಿಯಾ
- ಕೌಶಲ್ಯ ಭಾರತ
- ಸ್ಟಾರ್ಟ್ ಅಪ್ ಇಂಡಿಯಾ
- ಸ್ವಚ್ಛ ಭಾರತ
- ಸಶಕ್ತ ಭಾರತ
- ನವ ಭಾರತ
- ಪವರ್ನಿಂಗ್ ಇಂಡಿಯಾ
- ಪ್ರಧಾನ ಮಂತ್ರಿ ಆವಾಸ್ ಯೋಜನೆ ಮತ್ತು ಜಲ ಜೀವನ್ ಮಿಷನ್.
ಆನ್‌ಲೈನ್ ಸೆಲ್ಫಿ ಸ್ಪರ್ಧೆ: ಆಚರಣೆಯ ಭಾಗವಾಗಿ, ಆಗಸ್ಟ್ 15ರಿಂದ 20ರವರೆಗೆ MyGov ಪೋರ್ಟಲ್‌ನಲ್ಲಿ ರಕ್ಷಣಾ ಸಚಿವಾಲಯವು ಆನ್‌ಲೈನ್ ಸೆಲ್ಫಿ ಸ್ಪರ್ಧೆಯನ್ನು ಸಹ ನಡೆಸುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು 12 ಸೆಲ್ಫಿ ಪಾಯಿಂಟ್ಗಳಲ್ಲಿ ಒಂದು ಅಥವಾ ಹೆಚ್ಚಿನ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮತ್ತು ಅವುಗಳನ್ನು MyGov ಪ್ಲಾಟ್‌ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಲು ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಆನ್‌ಲೈನ್ ಸೆಲ್ಫಿ ಸ್ಪರ್ಧೆಯ ಆಧಾರದ ಮೇಲೆ ಪ್ರತಿ ಸೆಲ್ಫಿ ಪಾಯಿಂಟ್ನಿಂದ ಒಬ್ಬರಂತೆ 12 ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ತಲಾ 10 ಸಾವಿರ ರೂಪಾಯಿ ಬಹುಮಾನ ನೀಡಲಾಗುತ್ತದೆ.
ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿರುವ ಮುರ್ಮು:ರಾಷ್ಟ್ರ ರಾಜಧಾನಿ 77ನೇ ಸ್ವಾತಂತ್ರ್ಯ ದಿನಾಚರಣೆಗೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಐತಿಹಾಸಿಕ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಮಧ್ಯೆ ಸ್ವಾತಂತ್ರ್ಯ ದಿನಾಚರಣೆ ಮುನ್ನಾದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ಸಂಜೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣವನ್ನು ಆಕಾಶವಾಣಿಯ ರಾಷ್ಟ್ರೀಯ ನೆಟ್‌ವರ್ಕ್‌ನಲ್ಲಿ ಸಂಜೆ 7 ರಿಂದ ಪ್ರಸಾರ ಮಾಡಲಾಗುವುದು. ಮೊದಲು ಹಿಂದಿಯಲ್ಲಿ ಎಲ್ಲ ದೂರದರ್ಶನ ಚಾನೆಲ್‌ಗಳಲ್ಲಿ ಪ್ರಸಾರವಾಗಲಿದೆ. ನಂತರ ಇಂಗ್ಲಿಷ್ ಆವೃತ್ತಿಯಲ್ಲಿ ಪ್ರಸಾರವಾಗಲಿದೆ ಎಂದು ರಾಷ್ಟ್ರಪತಿ ಭವನ ತಿಳಿಸಿದೆ.
ದೆಹಲಿ ಪೊಲೀಸರಿಂದ ಟ್ರಾಫಿಕ್ ರೂಲ್ಸ್: ಮಂಗಳವಾರ ನಗರದಲ್ಲಿ ಸುಗಮ ವಾಹನ ಸಂಚಾರಕ್ಕಾಗಿ ದೆಹಲಿ ಪೊಲೀಸರು ಸಂಚಾರ ನಿಯಮಗಳನ್ನು ನೀಡಿದ್ದಾರೆ. ಬೆಳಗ್ಗೆ 4 ರಿಂದ 10 ಗಂಟೆಯವರೆಗೆ ಕೆಂಪು ಕೋಟೆಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ಸಂಚಾರ ಬಂದ್ ಆಗಿರುತ್ತದೆ. ಇದು ಅಧಿಕೃತ ವಾಹನಗಳಿಗೆ ಮಾತ್ರ ತೆರೆದಿರುತ್ತದೆ.
ಎಂಟು ರಸ್ತೆಗಳು - ನೇತಾಜಿ ಸುಭಾಷ್ ಮಾರ್ಗ, ಲೋಥಿಯನ್ ರಸ್ತೆ, ಎಸ್‌ಪಿ ಮುಖರ್ಜಿ ಮಾರ್ಗ, ಚಾಂದಿನಿ ಚೌಕ್ ರಸ್ತೆ, ನಿಶಾದ್ ರಾಜ್ ಮಾರ್ಗ, ಎಸ್‌ಪ್ಲನೇಡ್ ರಸ್ತೆ ಮತ್ತು ನೇತಾಜಿ ಸುಭಾಷ್ ಮಾರ್ಗಕ್ಕೆ ಅದರ ಸಂಪರ್ಕ ರಸ್ತೆ, ರಾಜ್‌ಘಾಟ್‌ನಿಂದ ಐಎಸ್‌ಬಿಟಿಗೆ ರಿಂಗ್ ರಸ್ತೆ ಮತ್ತು ಐಎಸ್‌ಬಿಟಿಯಿಂದ ಐಪಿ ಫ್ಲೈಓವರ್‌ಗೆ ಹೊರ ವರ್ತುಲ ರಸ್ತೆ ಮಂಗಳವಾರ ಸಾಮಾನ್ಯ ಸಂಚಾರಕ್ಕೆ ನಿರ್ಬಂಧಿಸಲಾಗಿದೆ. ಉತ್ತರ ದೆಹಲಿ ಮತ್ತು ತಮ್ಮ ಗಮ್ಯಸ್ಥಾನಗಳನ್ನು ತಲುಪಲು ಪ್ರಯಾಣಿಕರು ಅರಬಿಂದೋ ಮಾರ್ಗ, ಸಫ್ದರ್‌ಜಂಗ್ ರಸ್ತೆ, ಕಮಲ್ ಅಟತುರ್ಕ್ ಮಾರ್ಗ, ಕೌಟಿಲ್ಯ ಮಾರ್ಗ, ಎಸ್‌ಪಿ ಮಾರ್ಗ, 11 ಮೂರ್ತಿ, ಮದರ್ ತೆರೇಸಾ ಕ್ರೆಸೆಂಟ್, ಪಾರ್ಕ್ ಸ್ಟ್ರೀಟ್, ಮಂದಿರ ಮಾರ್ಗ, ಪಂಚಕುಲ ರಸ್ತೆ, ರಾಣಿ ಝಾನ್ಸಿ ರಸ್ತೆ, ಪರ್ಯಾಯ ಮಾರ್ಗಗಳಲ್ಲಿ ಸಂಚರಿಸಬಹುದು.
ಕೆಂಪು ಕೋಟೆ, ಜಾಮಾ ಮಸೀದಿ ಮತ್ತು ದೆಹಲಿ ಮುಖ್ಯ ರೈಲು ನಿಲ್ದಾಣದಲ್ಲಿ ಕೊನೆಗೊಳ್ಳುವ ಬಸ್ ಸೇವೆ ನಿರ್ಬಂಧಿಸಲಾಗಿದೆ. ಮಂಗಳವಾರ ಬೆಳಗ್ಗೆ 11 ಗಂಟೆಯ ನಂತರ ಸಾಮಾನ್ಯ ಬಸ್ ಸೇವೆಯನ್ನು ಪುನಾರಾಂಭಿಸಲಾಗುತ್ತದೆ. ಸೋಮವಾರ ಮಧ್ಯರಾತ್ರಿ 12 ಗಂಟೆಯಿಂದ ಮಂಗಳವಾರ ಬೆಳಗ್ಗೆ 11 ಗಂಟೆಯವರೆಗೆ ನಿಜಾಮುದ್ದೀನ್ ಖಟ್ಟಾ ಮತ್ತು ವಜೀರಾಬಾದ್ ಸೇತುವೆ ನಡುವೆ ಸರಕು ಸಾಗಣೆ ವಾಹನಗಳಿಗೆ ಅನುಮತಿಯಿಲ್ಲ.
ಸೋಮವಾರ ಮಧ್ಯರಾತ್ರಿ 12 ಗಂಟೆಯಿಂದ ಮಂಗಳವಾರ ಬೆಳಗ್ಗೆ 11 ಗಂಟೆಯವರೆಗೆ ಮಹಾರಾಣಾ ಪ್ರತಾಪ್ ಐಎಸ್‌ಬಿಟಿ ಮತ್ತು ಸರಾಯ್ ಕಾಲೇ ಖಾನ್ ಐಎಸ್‌ಬಿಟಿ ನಡುವೆ ಅಂತರರಾಜ್ಯ ಬಸ್ ಸೇವೆಯಿಲ್ಲ. ಡಿಟಿಸಿ ಸೇರಿದಂತೆ ಸ್ಥಳೀಯ ಸಿಟಿ ಬಸ್‌ಗಳು ಸೋಮವಾರ ಬೆಳಗ್ಗೆ 12 ರಿಂದ ಮಂಗಳವಾರ ಬೆಳಗ್ಗೆ 11 ಗಂಟೆಯವರೆಗೆ ಐಎಸ್‌ಬಿಟಿ ಕಾಶ್ಮೀರ್ ಗೇಟ್ ಮತ್ತು ರಿಂಗ್ ರೋಡ್ - ಎನ್‌ಹೆಚ್-24 (ಎನ್‌ಎಚ್-9)/ಎನ್‌ಹೆಚ್ ಟಿ-ಪಾಯಿಂಟ್ (ನಿಜಾಮುದ್ದೀನ್ ಖಟ್ಟಾ) ನಡುವೆ ರಿಂಗ್ ರಸ್ತೆಯಲ್ಲಿ ಸಂಚರಿಸುವಂತಿಲ್ಲ. ಲಭ್ಯವಿರುವ ಪರ್ಯಾಯ ಮಾರ್ಗಗಳನ್ನು ಬಳಸಿಕೊಳ್ಳಿ ಎಂದು ಸೂಚಿಸಿದ್ದಾರೆ.
ಪ್ರಧಾನಿ ಸ್ವಾಗತಕ್ಕೆ ರಾಜನಾಥ್ ಸಿಂಗ್: ಮಂಗಳವಾರ ಕೆಂಪು ಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು ಬರಮಾಡಿಕೊಳ್ಳಲಿದ್ದಾರೆ. ಗಿರಿಧರ್ ಅವರು ದೆಹಲಿ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ (GOC), ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಪ್ರಧಾನಿಗೆ ಪರಿಚಯಿಸುತ್ತಾರೆ. ನಂತರ ಅವರು ಪ್ರಧಾನ ಮಂತ್ರಿಯನ್ನು ಸೆಲ್ಯೂಟಿಂಗ್ ಬೇಸ್‌ಗೆ ಕರೆತರುತ್ತಾರೆ. ಅಲ್ಲಿ ಸಂಯೋಜಿತ ಇಂಟರ್ - ಸರ್ವೀಸಸ್ ಮತ್ತು ದೆಹಲಿ ಪೊಲೀಸ್ ಗಾರ್ಡ್ ಸಾಮಾನ್ಯ ಸೆಲ್ಯೂಟ್ ಮಾಡುತ್ತಾರೆ.
ಪ್ರಧಾನಮಂತ್ರಿಗಳು ಮೇಜರ್ ವಿಕಾಸ್ ಸಾಂಗ್ವಾನ್ ನೇತೃತ್ವದಲ್ಲಿ ಗಾರ್ಡ್ ಆಫ್ ಆನರ್ ಅನ್ನು ಪರಿಶೀಲಿಸಲಿದ್ದಾರೆ. ಗಾರ್ಡ್ ಆಫ್ ಹಾನರ್ ತುಕಡಿಯಲ್ಲಿ ಸೇನೆ, ವಾಯುಪಡೆ ಮತ್ತು ದೆಹಲಿ ಪೊಲೀಸರ ತಲಾ 25 ಸಿಬ್ಬಂದಿ ಮತ್ತು ನೌಕಾಪಡೆಯ ಒಬ್ಬ ಅಧಿಕಾರಿ ಮತ್ತು 24 ಸಿಬ್ಬಂದಿ ಇರುತ್ತಾರೆ. ಒಂದು ಜೆಸಿಒ ಮತ್ತು 20 ಇತರ ಶ್ರೇಣಿಗಳನ್ನು ಒಳಗೊಂಡಿರುವ ಸೇನಾ ಬ್ಯಾಂಡ್, ರಾಷ್ಟ್ರಧ್ವಜದ ಅನಾವರಣ ಮತ್ತು 'ರಾಷ್ಟ್ರೀಯ ಸೆಲ್ಯೂಟ್' ಪ್ರಸ್ತುತಿಯ ಸಮಯದಲ್ಲಿ ರಾಷ್ಟ್ರಗೀತೆಯನ್ನು ನುಡಿಸುತ್ತದೆ.
ಐವರು ಅಧಿಕಾರಿಗಳು ಮತ್ತು ಸೇನೆ, ನೌಕಾಪಡೆ, ವಾಯುಪಡೆ ಮತ್ತು ದೆಹಲಿ ಪೊಲೀಸರ 128 ಇತರ ಶ್ರೇಣಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ಧ್ವಜ ಗಾರ್ಡ್ 'ರಾಷ್ಟ್ರೀಯ ಸೆಲ್ಯೂಟ್' ಅನ್ನು ಪ್ರಸ್ತುತಪಡಿಸಲಿದ್ದಾರೆ. ತ್ರಿವರ್ಣವನ್ನು ಬಿಚ್ಚಿದಾಗ, ಲೈನ್ ಆಸ್ಟರ್ನ್ ರಚನೆಯಲ್ಲಿ ಏರ್ ಫೋರ್ಸ್‌ನ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳು ಮಾರ್ಕ್-III ಧ್ರುವ್ ಮೂಲಕ ಹೂಮಳೆ ಸುರಿಸಲಿವೆ. ನಂತರ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ದೇಶಾದ್ಯಂತದ ವಿವಿಧ ಶಾಲೆಗಳ 1,100 ಬಾಲಕ ಮತ್ತು ಬಾಲಕಿಯರ ಎನ್‌ಸಿಸಿ ಕೆಡೆಟ್‌ಗಳು (ಸೇನೆ, ನೌಕಾಪಡೆ ಮತ್ತು ವಾಯುಪಡೆ) ಇದರಲ್ಲಿ ಭಾಗವಹಿಸುತ್ತಾರೆ.
ಇದನ್ನೂ ಓದಿ:Har Ghar Tiranga: ಸಾಮಾಜಿಕ ಮಾಧ್ಯಮಗಳ ಡಿಪಿ ಬದಲಿಸಿದ ಪ್ರಧಾನಿ ಮೋದಿ.. ಹರ್ಘರ್ ತಿರಂಗಾ ಅಭಿಯಾನದಲ್ಲಿ ಭಾಗವಹಿಸಲು ಕರೆ