ಧಾರಾವಿ(ಮಹಾರಾಷ್ಟ್ರ): ಟೂತ್ ಪೇಸ್ಟ್ ಎಂದು ಇಲಿ ವಿಷದಿಂದ ಹಲ್ಲುಜ್ಜಿರುವ ಪರಿಣಾಮ 18 ವರ್ಷದ ಯುವತಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಧಾರಾವಿಯಲ್ಲಿ ನಡೆದಿದೆ. ಸೆಪ್ಟೆಂಬರ್ 3ರಂದು ಈ ಘಟನೆ ನಡೆದಿದೆ.
ಅಫ್ಸಾನಾ ಖಾನ್ ಎಂಬ ಯುವತಿ ಎಂದಿನಂತೆ ಬೆಳಗ್ಗೆ ಟೂತ್ ಪೇಸ್ಟ್ ಪಕ್ಕದಲ್ಲಿದ್ದ ಇಲಿ ವಿಷ(ಕ್ರೀಮ್) ಬ್ರಷ್ಗೆ ಹಾಕಿಕೊಂಡು ಹಲ್ಲುಜ್ಜಿದ್ದಾಳೆ. ಈ ವೇಳೆ ರುಚಿಯಿಂದ ವ್ಯತ್ಯಾಸ ಅರಿತು ತಕ್ಷಣವೇ ಅದನ್ನು ಉಗುಳಿ, ಬಾಯಿ ಸ್ವಚ್ಛಗೊಳಿಸಿದ್ದಾಳೆ. ಆದರೆ ಕೆಲ ಹೊತ್ತಿನಲ್ಲಿ ಆಕೆಗೆ ತಲೆತಿರುಗಲು ಶುರುವಾಗಿದೆ. ಈ ವೇಳೆ ಮನೆಯವರಿಗೆ ಹೇಳುವ ಬದಲು ಹೊಟ್ಟೆ ನೋವಿನ ಔಷಧಿ ಸೇವನೆ ಮಾಡಿದ್ದಾಳೆ. ಸುಮಾರು ಮೂರು ದಿನಗಳ ಕಾಲ ಮನೆಯಲ್ಲೇ ಇದಕ್ಕೆ ಔಷಧಿ ಸೇವನೆ ಮಾಡಿದ್ದಾಳೆ.
ಇದಾದ ಬಳಿಕ ಆಕೆಯ ಆರೋಗ್ಯ ಮತ್ತಷ್ಟು ಹದಗೆಡುತ್ತಿದ್ದಂತೆ ಮನೆಯಲ್ಲಿ ನಡೆದಿರುವ ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾಳೆ. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆರಂಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಕೆಯ ಆರೋಗ್ಯದಲ್ಲಿ ಯಾವುದೇ ರೀತಿಯ ಚೇತರಿಕೆ ಕಾಣಿಸಿಕೊಳ್ಳದ ಕಾರಣ ತಕ್ಷಣವೇ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಲ್ಲೂ ಕೂಡ ಯಾವುದೇ ರೀತಿಯ ಚೇತರಿಕೆ ಕಂಡಿಲ್ಲ. ಹೀಗಾಗಿ ಕೊನೇಯದಾಗಿ ಜೆ.ಜೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಆಕೆ ಸಾವನ್ನಪ್ಪಿದ್ದಾಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಧೋನಿಗೆ ಟೀಂ ಇಂಡಿಯಾ ಮೆಂಟರ್ಶಿಪ್ ಸ್ಥಾನಮಾನ: ದಾದಾ ಹೇಳಿದ್ದೇನು?
ಕಳೆದ ಕೆಲ ದಿನಗಳ ಹಿಂದೆ ಆಂಧ್ರಪ್ರದೇಶದ ಗೋದಾವರಿಯಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಇಲಿ ವಿಷದಿಂದ ಹಲ್ಲುಜ್ಜಿದ ಪರಿಣಾಮ ಯುವತಿ ಸಾವನ್ನಪ್ಪಿದ್ದಳು.