ಓಬಳಾಪುರ(ಬಳ್ಳಾರಿ ಗಡಿ):ದೇಶದ ಆರ್ಥಿಕತೆ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ವಾಕ್ಸಮರ ಮುಂದುವರಿದಿದೆ. ಪರೋಟಾ ಮೇಲೆ ಶೇ 18 ರಷ್ಟು ಜಿಎಸ್‌ಟಿ ಹಾಕಲಾಗಿದೆ. ತಿನ್ನುವ ಪದಾರ್ಥದ ಮೇಲೆ ಇಷ್ಟು ತೆರಿಗೆ ಹಾಕಬೇಕೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇದೇ ಆಹಾರ ಪದಾರ್ಥದ ಮೇಲೆ ಶೇ.28 ರಷ್ಟು ತೆರಿಗೆ ವಿಧಿಸಿತ್ತು. ರಾಹುಲ್ ಒಬ್ಬ "ಸುಳ್ಳಿನ ಸರದಾರ" ಎಂಬುದನ್ನು ಮತ್ತೆ ತೋರಿಸಿದ್ದಾರೆ ಎಂದು ಟೀಕಿಸಿದೆ.
ಭಾರತ್ ಜೋಡೋ ಯಾತ್ರೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಹಣದುಬ್ಬರವು 35 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ನಿರುದ್ಯೋಗ 45 ವರ್ಷಗಳ ಗರಿಷ್ಠ ಮಟ್ಟದಲ್ಲಿದೆ. ಪರೋಟಾಗಳಿಗೆ ಶೇ 18ರಷ್ಟು ಜಿಎಸ್‌ಟಿ ಏಕೆ ವಿಧಿಸಲಾಗುತ್ತಿದೆ?. ಕೃಷಿ ಕೆಲಸಕ್ಕಾಗಿ ಬಳಸುವ ಟ್ರ್ಯಾಕ್ಟರ್‌ಗಳ ಮೇಲೆ ಶೇ 12ರಷ್ಟು ತೆರಿಗೆ ಇದೆ. ತಿನ್ನುವ ಪದಾರ್ಥದ ಮೇಳೆ ಸಿಟ್ಟೇಕೆ ಎಂಬುದರ ಬಗ್ಗೆ ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ರಾಹುಲ್ ಗಾಂಧಿ ಕೋರಿದ್ದರು.
ಇದಕ್ಕೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ರಾಹುಲ್ ಗಾಂಧಿ ಸುಳ್ಳು ಕತೆಗಳನ್ನು ಮುಂದುವರಿಸಿದ್ದಾರೆ. ಅವರೊಬ್ಬ "ಬದಲಿಸಲಾಗದ ಸುಳ್ಳುಗಾರ" ಎಂದು ಟೀಕಿಸಿದ್ದು, ಕಾಂಗ್ರೆಸ್ ಅವಧಿಯ ಸರ್ಕಾರದಲ್ಲಿ ಪರೋಟಾಕ್ಕೆ ಶೇ 28ರಷ್ಟು ತೆರಿಗೆ ಇತ್ತು. ಅದನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದ ಬಳಿಕ ಶೇ18ಕ್ಕೆ ಇಳಿದಿದೆ. ಇದು ರಾಹುಲ್ ಅವರಿಗೆ ಕಾಣಿಸುವುದಿಲ್ಲವೇ ಎಂದು ಪ್ರಶ್ನಿಸಿದೆ.