ಚೆನ್ನೈ, ತಮಿಳುನಾಡು:ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆಯ ಮೇಲೆ ರಾಷ್ಟ್ರೀಯ ತನಿಖಾ ದಳದ ದಾಳಿಯಿಂದಾಗಿ ಕುಪಿತಗೊಂಡು ತಮಿಳುನಾಡಿನಲ್ಲಿ ಆರ್ಎಸ್ಎಸ್ ಸಂಘಟನೆಗೆ ಸೇರಿದ ವ್ಯಕ್ತಿಗಳ ಮನೆಯ ಮೇಲೆ ಪೆಟ್ರೋಲ್ ಬಾಂಬ್ ಎಸೆದ ಪ್ರಕರಣದಲ್ಲಿ 18 ಜನರನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 22 ರಂದು ಎನ್ಐಎ ಅಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಗೆ ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ 11 ಕಾರ್ಯಕರ್ತರನ್ನು ಬಂಧಿಸಲಾಗಿತ್ತು. ಇದರ ವಿರುದ್ಧ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಹಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ ಕೂಡ ನಡೆದಿತ್ತು.
ಇದಲ್ಲದೇ, ಕೊಯಮತ್ತೂರು, ಮಧುರೈ, ದಿಂಡಿಗಲ್, ಈರೋಡ್, ರಾಮನಾಥಪುರಂ, ಕನ್ಯಾಕುಮಾರಿಯಲ್ಲಿ ಸಂಘ ಪರಿವಾರದ ವ್ಯಕ್ತಿಗಳ ಮನೆಗಳ ಮೇಲೆ ಒಂದೇ ದಿನದಲ್ಲಿ ಪೆಟ್ರೋಲ್ ಬಾಂಬ್ ದಾಳಿ ಮಾಡಲಾಗಿತ್ತು. ಘಟನೆಯಲ್ಲಿ ಪ್ರಾಣ ಹಾನಿ ಸಂಭವಿಸದಿದ್ದರೂ, ಆಸ್ತಿ ಪಾಸ್ತಿ ಹಾನಿ ಉಂಟಾಗಿತ್ತು.