ನವದೆಹಲಿ: ಬಾಲ್ಕನಿಯಿಂದ ಕೆಳಗಡೆ ಬಿದ್ದು ಮೃತಪಟ್ಟ 18 ತಿಂಗಳ ಬಾಲಕಿಯ ಅಂಗಾಂಗಗಳನ್ನು ಪೋಷಕರು ದಾನ ಮಾಡಿದ್ದು, ಇದರಿಂದ ಇಬ್ಬರಿಗೆ ಮರು ಜೀವ ನೀಡಿದಂತೆ ಆಗಿದೆ. ಅಲ್ಲದೇ, ಅತಿ ಚಿಕ್ಕ ವಯಸ್ಸಿನಲ್ಲೇ ಮಗು ಮೃತಪಟ್ಟರೂ ಮತ್ತು ಆ ಮಗುವಿನ ಸಾವಿನಲ್ಲೂ ಪೋಷಕರು ಸಾರ್ಥಕತೆ ಮೆರೆದಿದ್ದಾರೆ.
ಹೌದು, ಹರಿಯಾಣದ ಮೇವಾತ್ ಜಿಲ್ಲೆಯ 18 ತಿಂಗಳ ಮಹಿರಾ ಎಂಬ ಮಗು ನವೆಂಬರ್ 6 ರಂದು ಸಂಜೆ ತನ್ನ ಮನೆಯ ಬಾಲ್ಕನಿಯಲ್ಲಿ ಆಟವಾಡುತ್ತಿದ್ದಳು. ಈ ವೇಳೆ, ಏಕಾಏಕಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿದೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ದೆಹಲಿಯ ಏಮ್ಸ್‌ನ ಟ್ರಾಮಾ ಸೆಂಟರ್‌ಗೆ ಪೋಷಕರು ದಾಖಲಿಸಿದ್ದರು.
ಅಂದಿನಿಂದ ಮಹಿರಾ ಜೀವನ್ಮರಣ ಹೋರಾಟ ನಡೆಸುತ್ತಿದ್ದಳು. ವೈದ್ಯರು ಸಾಕಷ್ಟು ಪ್ರಯತ್ನ ಮಾಡಿದರೂ ಮಹಿರಾಳನ್ನು ಉಳಿಸಲು ಸಾಧ್ಯವಾಗಲಿಲ್ಲ. ಕೊನೆಗೆ ನವೆಂಬರ್ 11ರಂದು ಬೆಳಗ್ಗೆ ಬಾಲಕಿಯ ಮೆದುಳು ಸಂಪೂರ್ಣವಾಗಿ ನಿಷ್ಕ್ರಿಯವಾಗಿದೆ ಎಂದು ವೈದ್ಯರು ಘೋಷಿಸಿದ್ದರು.