ಮುಂಬೈ (ಮಹಾರಾಷ್ಟ್ರ ):10ಮತ್ತು 12ನೇ ತರಗತಿ ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ವೇಳೆಯಲ್ಲಿಯೇ, ಹಳೆ ಪಿಂಚಣಿ ಯೋಜನೆ ಮರುಜಾರಿಗೊಳಿಸಲು ಆಗ್ರಹಿಸಿ ಮಹಾರಾಷ್ಟ್ರದ ಮುಂಬೈನಲ್ಲಿ 18 ಲಕ್ಷ ಸರ್ಕಾರಿ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಿದೆ. ಹೌದು, ಮಹಾರಾಷ್ಟ್ರ ಸರ್ಕಾರವು ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದರೂ ಕೂಡಾ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರು ಜಾರಿಗೊಳಿಸಲು ಒತ್ತಾಯಿಸಿ, ಸುಮಾರು 18 ಲಕ್ಷ ನೌಕರರು ಮಂಗಳವಾರ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ರಾಜ್ಯದಲ್ಲಿ ಒಪಿಎಸ್‌ಗಾಗಿ ಒತ್ತಾಯಿಸಿ, ಇಂದಿನಿಂದ ಪ್ರಾರಂಭವಾಗಿರುವ ಮುಷ್ಕರದಲ್ಲಿ ರಾಜ್ಯ ಸರ್ಕಾರ ಮತ್ತು ಸರ್ಕಾರದ ವಿವಿಧ ನಾಗರಿಕ ಸಂಸ್ಥೆಗಳು, ನೈರ್ಮಲ್ಯ ಕಾರ್ಯಕರ್ತರು ಮತ್ತು ಶಿಕ್ಷಕರು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದಾರೆ.
ಅನೇಕ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ:ಈ ಮುಷ್ಕರದಲ್ಲಿ ಮುಂಬೈನ ಜೆಜೆ ಆಸ್ಪತ್ರೆಯ ಗ್ರೇಡ್-III ಮತ್ತು IV ನೌಕರರು ಸಹ ಭಾಗವಹಿಸಿದ್ದಾರೆ. ಈ ಹಿಂದೆಯೂ ದೊಡ್ಡ ಮಟ್ಟದಲ್ಲಿ ಮುಷ್ಕರ ನಡೆಸಲಾಗಿತ್ತು. ಆದರೆ, ಇದರಿಂದ ಯಾವುದೇ ಪ್ರಯೋಜನಗಳು ಆಗಲಿಲ್ಲ. ಜೆಜೆ ಆಸ್ಪತ್ರೆಯ ನೌಕರರು ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರುವವರೆಗೂ ಧರಣಿ ಮುಂದೆವರಿಸುವುದಾಗಿ ಎಚ್ಚರಿಕೆ ನೀಡಿದರು. ಮುಷ್ಕರದಲ್ಲಿ ಅರೆವೈದ್ಯರು ಮತ್ತು ಶಿಕ್ಷಕರು ಭಾಗವಹಿಸುವುದರಿಂದ ಆಡಳಿತದ ಕಾರ್ಯನಿರ್ವಹಣೆಗೆ ಅಡ್ಡಿ ಉಂಟಾಗುತ್ತದೆ. ಅನೇಕ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ.
ನೌಕರರ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆ:ಹತ್ತನೇ ತರಗತಿ ಮತ್ತು 12ನೇ ತರಗತಿಯ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ ಶಿಕ್ಷಕರು ಕೂಡ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಸೋಮವಾರ ರಾಜ್ಯ ಸರ್ಕಾರ ಮತ್ತು ಒಕ್ಕೂಟಗಳ ನಡುವೆ ನಡೆದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ನೌಕರರು ಮುಷ್ಕರಕ್ಕೆ ಮುಂದಾದರು. ಮುಷ್ಕರ ಕೈಗೊಂಡಿರುವ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದಾರೆ.