ಲಖನೌ:ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರ್ದೇಶನದ ಮೇರೆಗೆ ಭಗವಾನ್ ಶ್ರೀರಾಮನ ನಗರವಾದ ಅಯೋಧ್ಯೆಯಲ್ಲಿ ದೀಪೋತ್ಸವವನ್ನು ಮತ್ತೊಮ್ಮೆ ಅದ್ದೂರಿಯಾಗಿ ಮಾಡಲು ಸಿದ್ಧತೆಗಳನ್ನು ಪ್ರಾರಂಭಿಸಲಾಗಿದೆ. ಅಯೋಧ್ಯೆಯಲ್ಲಿ ತ್ರೇತಾಯುಗದ ವೈಭವ ಮರಳಿಸಲು ಈ ಬಾರಿ ದೀಪೋತ್ಸವದಲ್ಲಿ 14 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಲು ಯೋಜಿಸಲಾಗಿದೆ.
ಇದಕ್ಕಾಗಿ ಪ್ರವಾಸೋದ್ಯಮ ಇಲಾಖೆ ಸಜ್ಜಾಗಿದೆ. ಇದಲ್ಲದೇ ಅಯೋಧ್ಯೆಯ 21 ಪ್ರಮುಖ ದೇವಾಲಯಗಳಲ್ಲಿ 4.50 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಎಲ್ಲ ಜಿಲ್ಲೆಗಳ ಡಿಎಂಗಳಿಗೆ ಆಯಾ ಗ್ರಾಮ ಸಭೆಗಳಿಂದ ತಲಾ ಹತ್ತು ದೀಪಗಳನ್ನು ತಯಾರಿಸಿ ಅವುಗಳನ್ನು ದಾನವಾಗಿ ಪಡೆದುಕೊಳ್ಳುವಂತೆ ಕೇಳಿದೆ. ಸರಯೂ ನದಿಯ ದಡದಲ್ಲಿರುವ ರಾಮ ಕಿ ಪೌಡಿಯಲ್ಲಿ ಈ ಎಲ್ಲ ದೀಪಗಳನ್ನು ಬೆಳಗಿಸಲಾಗುವುದು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತಂಡ ಕೂಡ ಇಲ್ಲಿಗೆ ಬರಲಿದ್ದು, ಘಟನೆಯನ್ನು ಸಾಕ್ಷೀಕರಿಸಲಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸೂಚನೆಯ ಮೇರೆಗೆ ಪ್ರತಿ ವರ್ಷ ದೀಪಾವಳಿಯ ಮುನ್ನಾದಿನದಂದು ಅಯೋಧ್ಯೆಯಲ್ಲಿ ಭವ್ಯವಾದ ದೀಪೋತ್ಸವ ಆಚರಿಸಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುಖೇಶ್ ಮೆಶ್ರಮ್ ಹೇಳಿದ್ದಾರೆ. ಈ ಬಾರಿಯ ಆರನೇ ದೀಪೋತ್ಸವದಂದು ರಾಮ್ ಕಿ ಪೌಡಿಯನ್ನು ಬೆಳಗಿಸುವ ಮೂಲಕ 14 ಲಕ್ಷಕ್ಕೂ ಹೆಚ್ಚು ದೀಪಗಳು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಲಿವೆ.
ಕಳೆದ ಬಾರಿ 12 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಇಲ್ಲಿ ಬೆಳಗಿಸಲಾಗಿತ್ತು. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಳ್ಳಲು ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪ್ರತಿ ಗ್ರಾಮಸಭೆಯಿಂದ 10 ದೀಪಗಳನ್ನು ದಾನ ಪಡೆಯಲು ಸೂಚನೆ ನೀಡಲಾಗಿದೆ ಎಂದು ಮುಖೇಶ್ ಮೇಶ್ರಮ್ ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಪ್ರಸಾದ್ ಮಾತನಾಡಿ, ದೀಪೋತ್ಸವದಂದು ರಾಮ್ ಕಿ ಪೌಡಿಯಲ್ಲಿ 14 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಗುವುದು. ಅಯೋಧ್ಯೆಯ 21 ಪ್ರಮುಖ ದೇವಾಲಯಗಳಲ್ಲಿ 4.50 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತದೆ. ರಾಮಜನ್ಮಭೂಮಿಯಲ್ಲಿ 51 ಸಾವಿರ, ಹನುಮಾನ್ ಗರ್ಹಿಯಲ್ಲಿ 21 ಸಾವಿರ ದೀಪಗಳನ್ನು ಬೆಳಗಿಸಲಾಗುವುದು ಎಂದು ತಿಳಿಸಿದರು.